ಬೆಳ್ತಂಗಡಿ, ಜೂ 25: ಸಚಿವ ಸಂಪುಟ ವಿಸ್ತರಣೆ, ನಿಗಮ ಹಾಗೂ ಮಂಡಳಿಗಳಿಗೆ ನೇಮಕ ಕಾರ್ಯ ಸದ್ಯದಲ್ಲಿಯೇ ನಡೆಯಲಿದ್ದು ಅದೂ ಸೇರಿದಂತೆ ರಾಜ್ಯ ರಾಜಕೀಯದ ಇತರ ವಿಚಾರಗಳ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಸಮಸ್ವಯ ಸಮಿತಿಯ ಅಧ್ಯಕ್ಷರೂ ಆಗಿರುವ ಸಿದ್ದರಾಮಯ್ಯ ಅವರೊಂದಿಗೆ ಚಿರ್ಚೆ ನಡೆಸಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆ.ಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ತಿಳಿಸಿದರು.
ರಾಜ್ಯದ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಭಾನುವಾರ ಸಂಜೆ ಧರ್ಮಸ್ಥಳಕ್ಕೆ ಭೇಟಿ ನೀಡಿದವೇಳೆ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಚಾರ ತಿಳಿಸಿದರು. ಮೈತ್ರಿ ಸರ್ಕಾರದಲ್ಲಿ ಯಾವುದೇ ಭಿನ್ನಮತವಿಲ್ಲ. ಸರಕಾರದ ಎಲ್ಲ ತೀರ್ಮಾನಗಳೂ ಸಮಸ್ವಯ ಸಮಿತಿಯಲ್ಲಿ ಉಭಯ ಪಕ್ಷದವರೂ ಸೇರಿ ಚರ್ಚೆ, ಸಮಾಲೋಚನೆ ಬಳಿಕ ತೆಗೆದುಕೊಳ್ಳಲಾಗುವುದು. ಯಾರೂ ವೈಯಕ್ತಿಕ ನಿರ್ಧಾರ ತೆಗೆದುಕೊಳ್ಳಲಾಗುವುದಿಲ್ಲ. ಬಜೆಟ್ ಬಗ್ಗೆ ಹಾಗೂ ಸಾಲ ಮನ್ನಾ ಬಗ್ಗೆಯೂ ಇದೇ ರೀತಿ ಚರ್ಚೆ ನಡೆಸಿದ್ದೇವೆ ಇದರಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಅವರಾಗಲಿ ಕಾಂಗ್ರೆಸ್ ಆಗಲಿ ಸಾಲಮನ್ನಾಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಹಿಂದೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಸಾಲಮನ್ನಾ ಮಾಡಿದ್ದಾರೆ ಎಂದು ವಿವರಿಸಿದರು.
ಧರ್ಮಸ್ಥಳಕ್ಕೆ ಇಂದಿನ ಭೇಟಿ ಆಕಸ್ಮಿಕವಾಗಿದ್ದು ಯಾವುದೇ ನಿಗದಿತ ಕಾರ್ಯಕ್ರಮವಿಲ್ಲ. ಈ ಭಾಗಕ್ಕೆ ಬಂದಾಗ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸುವುದು ಸ್ವಾಭಾವಿಕವಾಗಿದೆ. ಅವರೊಂದಿಗೆ ಬಜೆಟ್ ಸಾಲಮನ್ನಾ, ನಿಗಮ ಮಂಡಳಿಗಳ ಅಧ್ಯಕ್ಷರುಗಳ ನೇಮಕ ಹೀಗೆ ಎಲ್ಲ ವಿಚಾರಗಳನ್ನೂ ಚರ್ಚಿಸಲಾಗುವುದು. ಎರಡೂ ಪಕ್ಷಗಳ ಮುಖಂಡರುಗಳು ಸಿದ್ದರಾಮಯ್ಯ ಭೇಟಿಗೆ ಬರುತ್ತಿರುವುದರಲ್ಲಿ ಯಾವುದೇ ವಿಶೇಷವಿಲ್ಲ ಈ ಭಾಗಕ್ಕೆ ಬಂದಾಗ ಎಲ್ಲರೂ ಸಮನ್ವಯ ಸಮಿತಿ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾಗುತ್ತಿದ್ದಾರೆ ಅಷ್ಟೇ ಅದರಲ್ಲೇನೂ ವಿಶೇಷವಿಲ್ಲ ಎಂದರು.
ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನಕ್ಕೆ ಯಾರನ್ನು ನೇಮಿಸ ಬೇಕು ಎಂಬ ವಿಚಾರ ಹೈಕಮಾಂಡಿಗೆ ಬಿಟ್ಟದ್ದು ಸೂಕ್ತ ಸಮಯದಲ್ಲಿ ಸೂಕ್ತ ವ್ಯಕ್ತಿಯನ್ನು ಪಕ್ಷದ ಹೈಕಮಾಂಡ್ ನೇಮಕ ಮಾಡಲಿದೆ ಎಂದರು.
ಮುಖ್ಯಮಂತ್ರಿ ಕುಮಾರ ಸ್ವಾಮಿ ಈಗಾಗಲೆ ದೆಹಲಿಯಲ್ಲಿ ಪ್ರಧಾನಿಯವರನ್ನು ಭೇಟಿಯಾಗಿ ಸಾಲಮನ್ನಾಕ್ಕಾಗಿ ರಾಜ್ಯಕ್ಕೆ ೫೦,೦೦೦ ಕೋಟಿ ರೂ. ನೀಡಬೇಕೆಂದು ಮನವಿ ಸಲ್ಲಿಸಿದ್ದಾರೆ. ರಾಜ್ಯದಲ್ಲಿ ಮಳೆ-ಬೆಳೆ ಚೆನ್ನಾಗಿದೆ. ಹಾಗಾಗಿ ಬರಗಾಲದ ಭೀತಿ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಿಗಮ ಮಂಡಳಿಗಳ ಪಟ್ಟಿ ತಂದಿರುವಿರಾ ಎಂದು ಪತ್ರಕರ್ತರು ಕೇಳಿದಾಗ, ಪುಸ್ತಕದಲ್ಲಿಲ್ಲ, ಎಲ್ಲಾ ಮಸ್ತಕದಲ್ಲಿದೆ ಎಂದು ಮುಗುಳ್ನಗೆ ಬೀರಿದರು.
ವೀರೇಂದ್ರ ಹೆಗ್ಗಡೆಯವರೊಡನೆ ದೂರವಾಣಿ ಮೂಲಕವೇ ಮಾತನಾಡಿ ಜಿ. ಪರಮೇಶ್ವರ್ ಆಶೀರ್ವಾದ ಪಡೆದರು.ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಸ್ವಾಗತಿಸಿದರು. ವಿಧಾನ ಪರಿಷತ್ ಸದಸ್ಯ ಹಾಗೂ ಜಿಲ್ಲಾ ಕಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಜೊತೆಗಿದ್ದರು
ಬಜ್ಪೆಗೆ ವಿಮಾನ ಮೂಲಕ ಬಂದ ಉಪಮುಖ್ಯಮಂತ್ರಿ ಡಾ, ಜಿ ಪರಮೇಶ್ವರ್ ಅವರು ಬಜ್ಪೆಯಿಂದ ಖಾಸಗಿ ಇನ್ನೋವಾ ಕಾರಿನಲ್ಲಿ ಧರ್ಮಸ್ಥಳಕ್ಕೆ ಆಗಮಿಸಿದ ಅವರು ಶ್ರೀ ಮಂಜುನಾಧ ಸ್ವಾಮಿಯ ದರ್ಶನ ಪಡೆದರು. ಬಳಿಕ ಧರ್ಮಸ್ಥಳ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಇಬ್ಬರೇ ನಾಯಕರು ಸಿದ್ದರಾಮಯ್ಯ ಅವರ ಕೊಠಡಿಯಲ್ಲಿ ಸುಮಾರು ಒಂದುವರೆ ಗಂಟೆಗಳ ಕಾಲ ಗುಪ್ತ ಮಾತುಕತೆ ನಡೆಸಿದರು.
ಕಾರ್ಯಕರ್ತರ ಅಸಮಾಧಾನ: ಮಂಗಳೂರಿನಿಂದ ಬಂದ ಕಾಂಗ್ರೆಸ್ ಕಾರ್ಯಕರ್ತರನ್ನು ಶಾಂತಿವನದಲ್ಲಿ ಒಳಗೆ ಬಿಡಲಿಲ್ಲ ಎಂದು ಅವರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದರು.
ಆಗ ವಾಕಿಂಗ್ ಮಾಡುತ್ತಿದ್ದ ಸಿದ್ದರಾಮಯ್ಯ ಗೇಟಿನ ಹೊರಗೆ ಬಂದು ಕಾರ್ಯಕರ್ತರೊಂದಿಗೆ ಮಾತನಾಡಿ ಸಮಾಧಾನಗೊಳಿಸಿದರು. ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.