ಪುತ್ತೂರು, ಡಿ. 30 (DaijiworldNews/SM): ಪುತ್ತೂರು ತಾಲೂಕಿನ ೨೨ ಗ್ರಾಮ ಪಂಚಾಯಿತಿಗಳ 343 ಸ್ಥಾನಗಳ ಪೈಕಿ 322 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಭಾರೀ ಬಹುಮತದತ್ತ ದಾಪುಗಾಲು ಹಾಕಿದ್ದು, ಕಾಂಗ್ರೆಸ್ ಬೆಂಬಲಿತರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಎಸ್ಡಿಪಿಐ ಬೆಂಬಲಿತರು ಏಳು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಜೆಡಿಎಸ್ ಬೆಂಬಲಿತರು ಒಂದು ಸ್ಥಾನ ಗೆದ್ದಿದ್ದಾರೆ. ಐದು ವರ್ಷಗಳ ಹಿಂದೆ ನಡೆದ ಚುನಾವಣೆಯಲ್ಲಿ ಅಂದಿನ ಅವಿಭಜಿತ ಪುತ್ತೂರು ತಾಲೂಕಿನ ಪೈಕಿ ಈಗಿನ ಪುತ್ತೂರು ತಾಲೂಕು ವ್ಯಾಪ್ತಿಯ 22 ಗ್ರಾ ಪಂಗಳಲ್ಲಿ ಬಿಜೆಪಿ 14, ಕಾಂಗ್ರೆಸ್ 7 ಪಂಚಾಯಿತಿಗಳಲ್ಲಿ ಬಹುಮತ ಪಡೆದುಕೊಂಡಿದ್ದರೆ, ಉಪ್ಪಿನಂಗಡಿ ಪಂಚಾಯಿತಿಯಲ್ಲಿ ಸಮಬಲ ಸಾಧನೆಯಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ನೆಟ್ಟಣಿಗೆ ಮುಡ್ನೂರು ಮತ್ತು ಕೊಳ್ತಿಗೆ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಸ್ಪಷ್ಟ ಬಹುಮತ ಪಡೆದಿದ್ದಾರೆ. ಉಳಿದಂತೆ 20 ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಮುನ್ನಡೆ ಸಾಧಿಸಿದ್ದಾರೆ. ರಾತ್ರಿ 10 ಗಂಟೆವರೆಗಿನ ಎಣಿಕೆ ಲೆಕ್ಕಾಚಾರದ ಪ್ರಕಾರ ಈ ಗತಿಯನ್ನು ಗಮನಿಸಲಾಗಿದ್ದು, ಲೆಕ್ಕಾಚಾರ ಪೂರ್ತಿಗೊಂಡಾ ಚಿತ್ರಣದಲ್ಲಿ ಬದಲಾವಣೆ ಸಂಭವವಿದೆ.