ಮಡಿಕೇರಿ, ಜೂ 24 : ಸೆಲ್ಫಿ ಕ್ರೇಜಿಗೆ ಇನ್ನೊಂದು ಜೀವ ಬಲಿಯಾಗಿದೆ. ಬೆಳ್ನೊರೆಯ ಜಲಪಾತದ ರುದ್ರರಮಣೀಯ ಜತೆ ಚೆಲ್ಲಾಟವಾಡಳು ಹೋಗಿ ಕಾಲು ಜಾರಿ ಬಿದ್ದು ಬದುಕು ಕಳೆದುಕೊಂಡವನು ಸೋಮವಾರಪೇಟೆ ತಾಲೂಕಿನ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದ ನಿವಾಸಿ ಮನೋಜ್ (24) . ಈತ ಶುಕ್ರವಾರದಂದು ತನ್ನ ಆರು ಮಂದಿ ಸ್ನೇಹಿತರೊಂದಿಗೆ ವಿವಾಹ ಕಾರ್ಯಕ್ರಮಕ್ಕೆ ತೆರಳಿದ್ದ. ಅಲ್ಲಿಂದ ಹಿಂತಿರುಗುವಾಗ ಜಲಪಾತ ವೀಕ್ಷಣೆಗೆ ಸ್ನೇಹಿತರೆಲ್ಲರೂ ತೀರ್ಮಾನಿಸಿದ್ದಾರೆ. ಕೊಡಗಿನ ಸೋಮವಾರಪೇಟೆ ಪ್ರಸಿದ್ದ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದಾರೆ. ಮಳೆಯ ಕಾರಣ ಜಲಪಾತದಲ್ಲಿ ನೀರು ಅಧಿಕವಾಗಿದ್ದು ಜಲಪಾತದ ಸೌಂದರ್ಯ ಮನಸೂರೆಗೊಳ್ಳುವಂತಿತ್ತು.
ಜಲರಾಶಿಯ ಸೌಂದರ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲು ಮುಂದಾದ ಮನೋಜ್ , ತನ್ನೊಂದಿಗೆ ಬಂದಿದ್ದ ಸ್ನೇಹಿತರ ಮಾತು ಅಲಿಸದೇ ನೇರವಾಗಿ ನೀರಿನ ಸಮೀಪಕ್ಕೆ ತೆರಳಿದ್ದಾನೆ. ಹಾಗೆ ತೆರಳಿದ್ದಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ಕ್ಷಣ ಮಾತ್ರದಲ್ಲೇ, ಬೋರ್ಗರೆಯುವ ನೀರಿನಲ್ಲಿ ಆತನ ದೇಹ ಕಾಣೆಯಾಗಿತ್ತು.
ವಿಷಯ ತಿಳಿದ ಅಗ್ನಿಶಾಮಕ ಪಡೆ ಘಟನಾ ಸ್ಥಳಕ್ಕೆ ಆಗಮಿಸಿ ಆತನಿಗಾಗಿ ಹುಡುಕಾಡಿದರೂ ಮಳೆ, ನೀರಿನ ರಭಸದ ಪರಿಣಾಮ ನಾಲ್ಕು ಗಂಟೆಗಳ ಶೋಧಕಾರ್ಯ ಕೈಗೂಡಲಿಲ್ಲ.
"ನೀರಿನ ರಭಸ ಅಧಿಕವಾಗಿದ್ದು ಶವ ಇರುವ ಜಾಗ ಪತ್ತೆ ಮಾಡುವುದು ಅಸಾಧ್ಯವಾಗಿದೆ.ನೀರು ಕಡಿಮೆಯಾದ ಪಕ್ಷದಲ್ಲಿ ಕಾರ್ಯಾಚರಣೆ ಮುಂದುವರಿಸಬಹುದು" ಎಂದು ಠಾಣಾಧಿಕಾರಿ ಶಿವಣ್ಣ ಹೇಳಿದ್ದಾರೆ.
ಅಪಾಯದ ಜಾಗಕ್ಕೆ ತೆರಳದಂತೆ ಸೂಚನಾ ಫಲಕ ಹಾಕಿದ್ದರೂ ಪ್ರವಾಸಿಗರು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಹುಚ್ಚು ಸಾಹಸ ಮಾಡಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.