ಮಂಗಳೂರು, ಜೂ.23: ನಗರದಲ್ಲಿರುವ ಬಂದರಿನ 3ನೇ ಹಂತದ ಮೀನುಗಾರಿಕಾ ಜಟ್ಟಿ ಅಭಿವೃದ್ಧಿ ಕಾಮಗಾರಿ ವ್ಯವಸ್ಥಿತವಾಗಿ ಆಗದಿರಲು ಕೇಂದ್ರ ಸರಕಾರದ ವೈಫಲ್ಯವೇ ಪ್ರಮುಖ ಕಾರಣವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೋ ಗಂಭೀರ ಆರೋಪ ಮಾಡಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದಲ್ಲಿ ಮಂಗಳೂರು ಬಂದರು ಪ್ರಮುಖ ಬಂದರಾಗಿದ್ದು ಸುಮಾರು 3000ಕ್ಕೂ ಯಾಂತ್ರೀಕೃತ ದೋಣಿಗಳಿದೆ. ಆದರೆ ಬಂದರಿನಲ್ಲಿ ದೋಣಿಗಳಿಗೆ ನಿಲ್ಲಲು ಸಮರ್ಪಕವಾದ ಜಾಗವಿಲ್ಲ. ಬಂದರಿನಲ್ಲಿ 3ನೇ ಹಂತದ ಮೀನುಗಾರಿಕಾ ಜಟ್ಟಿ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡರೆ ಸಮಸ್ಯೆ ಕಡಿಮೆಯಾಗುತ್ತದೆ. 2010ರಲ್ಲಿ ಶಿಲಾನ್ಯಾಸಗೊಂಡ ಈ ಜಟ್ಟಿ ಅಭಿವೃದ್ಧಿ ಕಾಮಗಾರಿ 2015ರಲ್ಲಿ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಇದು ಪೂರ್ಣಗೊಂಡಿಲ್ಲ. ಇದಕ್ಕೆ ಕೇಂದ್ರ ಸರಕಾರದ ವೈಫಲ್ಯವೇ ಪ್ರಮುಖ ಕಾರಣ ಎಂದು ಹೇಳಿದ್ದಾರೆ.
3ನೇ ಹಂತದ ಮೀನುಗಾರಿಕಾ ಜಟ್ಟಿ ಅಭಿವೃದ್ಧಿ ಕಾಮಗಾರಿಯ ಒಟ್ಟು ವೆಚ್ಚ 57.60 ಕೋಟಿ ರೂ. ಇದರಲ್ಲಿ ಕೇಂದ್ರ ಸರಕಾರದ ಪಾಲು 43.20 ಕೋಟಿ ರೂ. ಆಗಿದ್ದರೆ, ರಾಜ್ಯ ಸರಕಾರಕ್ಕೆ 14.40 ಕೋಟಿ ರೂ ನಿಗದಿಪಡಿಸಲಾಗಿತ್ತು. 2010ರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಈ ಯೋಜನೆಗೆ ಅನುಮತಿ ಮಂಜೂರಾಗಿದ್ದು, ಹಸಿರು ಪೀಠಕ್ಕೆ ಕೆಲ ಸ್ಥಳೀಯರು ದೂರು ನೀಡಿದ್ದರಿಂದ ಯೋಜನೆ ಅರ್ಧಕ್ಕೆ ನಿಂತು ಹೋಗಿತ್ತು. ಆದರೆ 2017 ರಲ್ಲಿ ಮತ್ತೆ ಪ್ರಕರಣ ಸರಿಹೋಗಿತ್ತು. ಈಗಾಗಲೇ ಈ ಯೋಜನೆಗೆ 51.89 ಕೋಟಿ ವೆಚ್ಚವಾಗಿದ್ದು, ರಾಜ್ಯ ಸರ್ಕಾರ 38.89 ಕೋಟಿ ರೂ ಭರಿಸಿದೆ. ಕೇಂದ್ರ ಸರಕಾರ 43.20 ಕೋಟಿ ರೂ ಅನುದಾನ ನೀಡಬೇಕಾಗಿದೆ. ಆದರೆ ಕೇಂದ್ರ ಸರ್ಕಾರದಿಂದ ಕೇವಲ 13 ಕೋಟಿ ರೂ ಮಾತ್ರ ದೊರೆತಿದೆ. ಇದನ್ನು ಹೊರತಾಗಿ ಯಾವುದೇ ರೀತಿಯ ಸ್ಪಂದನೆ ಸಿಕ್ಕಿಲ್ಲ ಎಂದು ಆರೋಪ ಮಾಡಿದ್ದಾರೆ.