ಮಂಗಳೂರು, ಜೂ23: ಟಿಪ್ಪು ಹೆಸರನ್ನು ಹಜ್ ಭವನಕ್ಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ ಆದರೆ, ಹಠಕ್ಕೆ ಬಿದ್ದು ಯಾರೊಬ್ಬರ ಹೆಸರಿಡುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿದ್ದಾರೆ.
ಧರ್ಮಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಿಪ್ಪು ಹೆಸರಿಂದಲೇ ಕಾಂಗ್ರೆಸ್ ಗೆ ಸೋಲಾಗಿದೆ ಅನ್ನೋದು ತಪ್ಪು. ಒಬ್ಬ ಶ್ರೇಷ್ಠ ವ್ಯಕ್ತಿ, ಹೋರಾಟಗಾರರ ಹೆಸರನ್ನು ಹಜ್ ಭವನಕ್ಕೆ ಇಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಹಠಕ್ಕೆ ಬಿದ್ದು ಯಾರೊಬ್ಬರ ಹೆಸರಿಡುವುದು ಸರಿಯಲ್ಲ. ನಿಜವಾದ ಗೌರವ ಮತ್ತು ನಾಯಕರ ಮೇಲಿನ ವಿಶ್ವಾಸಕ್ಕೆ ಆ ಹೆಸರಿಡುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷವು ಸಮಾಜಕ್ಕಾಗಿ ಬಹಳಷ್ಟು ಒಳ್ಳೆಯ ಕೆಲಸವನ್ನು ಮಾಡಿದೆ. ನೆಹರೂ, ರಾಜೀವ್ ಗಾಂಧಿ ಕಾಲದಿಂದಲೂ ಕಾಂಗ್ರೆಸ್ ಜನಪರ ಕೆಲಸವನ್ನು ಮಾಡಿಕೊಂಡು ಬಂದಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಮಾಡಿದ್ದರು. ಅದೊಂದೇ ತಪ್ಪು ಎಂದು ನೋಡಬಾರದು. ಹಾಗಿದ್ದರೆ, ಜನರಿಗೆ ಸಿದ್ದರಾಮಯ್ಯ ಸರ್ಕಾರ ಕೊಟ್ಟ ಭಾಗ್ಯಗಳಿಗೆ ಬೆಲೆ ಇಲ್ವಾ ಎಂದು ಪ್ರಶ್ನಿಸಿದ್ದಾರೆ.
ಅನೇಕ ಮಹಾನ್ ವ್ಯಕ್ತಿಗಳ ಜಯಂತಿಗಳನ್ನು ಕೂಡ ಸರ್ಕಾರದ ಕಾರ್ಯಕ್ರಮವಾಗಿ ಮಾಡುತ್ತಿದೆ. ಆದ್ದರಿಂದ ನಾವು ಕೆಲವೊಂದನ್ನು ಮಾತ್ರ ಯಾಕೆ ಕೆಟ್ಟ ದೃಷ್ಟಿಯಿಂದ ನೋಡಬೇಕು. ಹೀಗಾಗಿ, ಟಿಪ್ಪು ಜಯಂತಿ ಆಚರಣೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಮೋಟಮ್ಮ ಹೇಳಿದ್ದಾರೆ.