ಬೆಳ್ತಂಗಡಿ, ಜೂ23: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯದತ್ತ ತೆರಳುತ್ತಿದ್ದ ಯಾತ್ರಿಕರ ಮೇಲೆ ಕಾಡಾನೆಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಇಂದು ಬೆಳಿಗ್ಗೆ ಸುಮಾರು 7 ಗಂಟೆಗೆ ಕೈಕಂಬ ಬಳಿ ಈ ಘಟನೆ ನಡೆದಿದೆ. ಈ ಕಾಡಾನೆಗಳ ದಾಳಿಗೆ ಸಿಲುಕಿ ಒಟ್ಟು ಆರು ಮಂದಿ ಯಾತ್ರಿಕರು ಗಾಯಗೊಂಡಿದ್ದಾರೆ. ಮಾತ್ರವಲ್ಲ, ಯಾತ್ರಿಕರು ಪ್ರಯಾಣಿಸುತ್ತಿದ್ದ ಮಾರುತಿ ಆಮ್ನಿ ವ್ಯಾನ್ ಮೇಲೆಯೂ ಆನೆಗಳು ದಾಳಿ ನಡೆಸಿದ್ದು, ವಾಹನ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ಚಾಲಕ ಜೋರಾಗಿ ಹಾರನ್ ಮಾಡಿದ್ದ ಪರಿಣಾಮ, ಕಾಡಾನೆಗಳು ಕಾಡಿನತ್ತ ನುಗ್ಗಿದೆ.
ಯಾತ್ರಿಕರೆಲ್ಲರೂ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನವರಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.