ಚಿಕ್ಕಮಗಳೂರು, ಜೂ23: ಜೈಲಿನಲ್ಲಿ ಇದ್ದುಕೊಂಡೇ ಆಗಂತುಕರು ಬಿಜೆಪಿ ಮುಖಂಡ ಮಹಮದ್ ಅನ್ವರ್ ಕೊಲೆಗೆ ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ ಎಂದು ಶಾಸಕ ಸಿಟಿ ರವಿ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮುಖಂಡ ಮಹಮದ್ ಅನ್ವರ್ ಸಮಾಜಘಾತುಕ ಶಕ್ತಿಗಳು ತಲೆ ಎತ್ತುವುದನ್ನು ತಡೆಯಲು ತಡೆಗೋಡೆಯಾಗಿದ್ದ. ಇದೀಗ ಆಗಂತುಕರು ಜೈಲಿನಲ್ಲಿ ಇದ್ದುಕೊಂಡೇ ಸ್ಕೆಚ್ ಹಾಕಿ ಹತ್ಯೆ ಮಾಡಿಸಿದ್ದಾರೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಬೇಕಿದೆ ಎಂದು ಹೇಳಿದ್ದಾರೆ.
ಕರಾವಳಿಯಲ್ಲಿ ಕಾಣುತ್ತಿದ್ದ ಹತ್ಯಾ ರಾಜಕಾರಣ ಚಿಕ್ಕಮಗಳೂರಿನಲ್ಲಿಯೂ ಕಾಲಿಟ್ಟಿರುವುದು ಬಹಳ ಗಂಭೀರವಾದ ವಿಷಯ. ಈ ಕೊಲೆ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಯಾವುದೇ ಒತ್ತಡಕ್ಕೆ ಮಣಿಯಬಾರದು. ಚಿಕ್ಕಮಗಳೂರು ಜನತೆ ಹತ್ಯೆಯನ್ನು ಖಂಡಿಸಿ ಒಂದು ಗಂಟೆಗಳ ಕಾಲ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ಮಾಡಿ ಮೃತರಿಗೆ ಗೌರವ ಸಲ್ಲಿಸಬೇಕು. ಮಾತ್ರವಲ್ಲ, ಜೈಲಿನಿಂದಲೇ ಕೊಲೆ ಮಾಡಿಸಲು ಅವಕಾಶ ಕೊಟ್ಟಿರುವುದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಆಗ್ರಹ ಮಾಡಿದ್ದಾರೆ.
ಘಟನೆಯ ವಿವರ:
ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ, ಅಲ್ವಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಅನ್ವರ್ ಅವರನ್ನು ದುಷ್ಕರ್ಮಿಗಳು ಕೊಲೆ ನಡೆಸಿದ್ದಾರೆ. ಶುಕ್ರವಾರ ರಾತ್ರಿ ಸುಮಾರು 9.30ಕ್ಕೆ ಈ ಘಟನೆ ನಡೆದಿತ್ತು. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.