ಮಂಗಳೂರು, ಜೂನ್ 23: ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿರುವ ವಿಶೇಷ ಪ್ರೀತಿಯಿಂದ ಮತ್ತು ಅವರ ಆಯುಷ್ಯ ವೃದ್ಧಿಗಾಗಿ ಕರಾವಳಿಯ ಕೆಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿಸಲಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಮೋದಿ ಅವರ ಜನ್ಮನಕ್ಷತ್ರ ಅನೂರಾಧವಾಗಿದ್ದು, ಈ ನಕ್ಷತ್ರದ ದಿನದಂದು ಪ್ರತಿ ತಿಂಗಳು ದೇವಾಲಯದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. ಕರಾವಳಿಯ ವಿ.ಟಿ.ರಸ್ತೆಯಲ್ಲಿರುವ ವಿಠೋಬಾ ರುಕುಮಾಯಿ ದೇವಾಲಯ, ಉಡುಪಿಯ ಕಟಪಾಡಿ ವಿಶ್ವನಾಥ ಕ್ಷೇತ್ರ ಸೇರಿದಂತೆ ಹಲವೆಡೆ ಮೋದಿ ಹೆಸರಿನಲ್ಲಿ ದೇವರಿಗೆ ಪೂಜಾ ಸೇವೆ ನಡೆಯುತ್ತಿದೆ.ಮೋದಿ ಅವರ ಆಯುಷ್ಯ ವೃದ್ಧಿಗಾಗಿ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಪ್ರಧಾನಿ ಆಗಬೇಕು ಎಂದು ಭಕ್ತ ಜನರಿಂದ ಪ್ರಾರ್ಥನೆಗಳು ನಡೆಯುತ್ತಿವೆ.
ವಿಠೋಬಾ ರುಕುಮಾಯಿ ದೇವಾಲಯದಲ್ಲಿ ಜೂನ್ 25ರಂದು ರಾತ್ರಿ 8 ಗಂಟೆಗೆ ಮೋದಿ ಅವರ ಶ್ರೇಯೋಭಿವೃದ್ಧಿಗಾಗಿ ವಿಶೇಷ ಪೂಜೆ ನಡೆಯಲಿದ್ದು, ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ ಅವರ ಹೆಸರಿನಲ್ಲಿ ಅನ್ನಸಂತರ್ಪಣೆ ಸೇವೆ ಕೂಡ ಬುಕ್ ಮಾಡಲಾಗಿದೆ. ಕಟಪಾಡಿಯ ಮೋದಿ ಆಭಿಮಾನಿಗಳು ಮತ್ತು ಸಂಘಪರಿವಾರದ ಕಾರ್ಯಕರ್ತರು ಈ ಸೇವೆ ಬುಕ್ ಮಾಡಿದ್ದಾರೆ ಎಂದು ದೇವಾಲಯದ ಆಡಳಿತ ವರ್ಗ ತಿಳಿಸಿದೆ.