ಮಂಗಳೂರು, ಜೂ22: ನಗರದ ಪಂಪ್ವೆಲ್ನಲ್ಲಿರುವ ಲಾಡ್ಜ್ವೊಂದಕ್ಕೆ ಪೊಲೀಸರು ದಾಳಿ ನಡೆಸಿದ್ದು, ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಹಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಪಂಪ್ವೆಲ್ನಲ್ಲಿರುವ ಅನ್ನಪೂರ್ಣ ಹೊಟೇಲ್ ಹಾಗೂ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಆರು ಮಂದಿ ಬಾಂಗ್ಲಾ ಮೂಲದ ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಅನ್ನಪೂರ್ಣ ಹೊಟೇಲ್ ಹಾಗೂ ಲಾಡ್ಜ್ ಇರುವ ಕಟ್ಟಡದ ಮೂರನೇ ಮಹಡಿಯಲ್ಲಿನ ರಹಸ್ಯ ಕೊಠಡಿಯಲ್ಲಿ ಯುವತಿಯರನ್ನು ಕೂಡಿ ಹಾಕಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಈ ವೇಳೆ 6 ಯುವತಿಯರು ಪತ್ತೆಯಾಗಿದ್ದು, ನಾಲ್ಕು ಯುವತಿಯರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೈಲ್ಡ್ ಲೈನ್ ಸಂಸ್ಥೆ ನೀಡಿದ ಮಾಹಿತಿ ಮೇರೆಗೆ ಇಂದು ಮುಂಜಾನೆ ವೇಳೆ ಈ ದಾಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನಿವಾಸಿ ಪವನ್(26) ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಮುಖ ಆರೋಪಿ ಶಿವರಾಮ ಪೂಜಾರಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಇದೀಗ ಈ ವೇಶ್ಯಾವಾಟಿಕೆ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ.