ಮೂಡುಬಿದಿರೆ, ಜೂ22: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಪ್ರಕರಣ ಇದೀಗ ಮತ್ತೆ ಸುದ್ದಿ ಮಾಡಿದ್ದು, ಈ ಸಾವಿನ ಕುರಿತಾಗಿ ನಿಸ್ಪಕ್ಷಪಾತವಾದ ತನಿಖೆಯನ್ನು ನಡೆಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಈ ಪ್ರಕರಣ ನಡೆದು ಒಂದು ವರ್ಷ ಸಮೀಪಿಸುತ್ತಿದ್ದು, ವಿದ್ಯಾರ್ಥಿನಿ ಸಾವಿನ ಬಗ್ಗೆ ಇನ್ನೂ ಫೈನಲ್ ರಿಪೋರ್ಟ್ ಹೊರಬಂದಿಲ್ಲ. ಇದೀಗ ಈ ಸಾವಿನ ವರದಿ ತಯಾರಿಸದ ಪೊಲೀಸರ ವಿರುದ್ಧವೇ ಭಾರಿ ಆಕ್ರೋಶ ಭುಗಿಲೆದ್ದಿದೆ. ಮಾತ್ರವಲ್ಲ, ಜಸ್ಟಿಸ್ ಫಾರ್ ಕಾವ್ಯಾ ಹೋರಾಟ ಸಮಿತಿ ಸ್ಥಳೀಯ ಪೊಲೀಸರ ತನಿಖೆ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಮಾತ್ರವಲ್ಲ, ಕಾವ್ಯ ಸಾವಿನ ಪ್ರಕರಣವನ್ನು ಸಿಓಡಿ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದೆ. ಒಂದು ತಿಂಗಳ ಒಳಗೆ ಸಿಓಡಿ ತನಿಖೆಗೆ ಒಪ್ಪಿಸದಿದ್ದರೆ, ಜುಲೈ 20 ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಶಿಕ್ಷಣ ಸಂಸ್ಥೆಯ ಪ್ರಭಾವಿಗಳಿಗೆ ಮಣಿದು ತನಿಖೆಯನ್ನು ವಿಳಂಬಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಇದೀಗ ಈ ಬಗ್ಗೆ ಸಾಂಕೇತಿಕ ಪ್ರತಿಭಟನೆ ನಡೆಸಿ, ಸಮಿತಿ ಸದಸ್ಯರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದಾರೆ.