ಜೂ, 21: ಪ್ರಧಾನಿ ಮೋದಿ ಅವಿವಾಹಿತ ಎಂದು ಗುಜರಾತ್ ಮಾಜಿ ಮುಖ್ಯಮಂತ್ರಿ ಹಾಗೂ ಮಧ್ಯಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ನೀಡಿದ ಹೇಳಿಕೆಗೆ ಮೋದಿಯವರ ಪತ್ನಿ ಜಶೋದಾಬೆನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಆನಂದಿಬೆನ್ ನೀಡಿರುವ ಮಾಧ್ಯಮ ಹೇಳಿಕೆಯಿಂದ ನಾನು ಚಕಿತನಾಗಿದ್ದೇನೆ. ಪ್ರಧಾನಿ ಮೋದಿಯವರು ನನಗೆ ಶ್ರೀರಾಮನಿದ್ದಂತೆ. ಅವರ ಹೇಳಿಕೆ ಭಾರತದ ಪ್ರಧಾನ ಮಂತ್ರಿಯಾಗಿರುವ ಮೋದಿಯವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತದ್ದಾಗಿದೆ. ಅವರು ತುಂಬಾ ಗೌರವಾನ್ವಿತ ವ್ಯಕ್ತಿ. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ನನಗೆ ಆನಂದಿಬೆನ್ ಹೇಳಿಕೆ ಸರಿ ಕಾಣುವುದಿಲ್ಲ ಎಂದು ಹೇಳಿದ್ದಾರೆ.
2014ರ ಲೋಕಸಭೆ ಚುನಾವಣೆಗೆ ತಮ್ಮ ನಾಮಪತ್ರ ಸಲ್ಲಿಸವಾಗ ಸ್ವತಃ ನರೇಂದ್ರ ಮೋದಿಯವರೇ ತಾವು ವಿವಾಹಿತ ಎಂದು ನನ್ನ ಹೆಸರನ್ನು ನಮೂದಿಸಿದ್ದಾರೆ ಎಂದು ಹೇಳಿರುವುದನ್ನು ಜಶೋದಾಬೆನ್ ಸೋದರ ಅಶೋಕ್ ಮೋದಿ ತಮ್ಮ ಮೊಬೈಲ್ ಫೋನ್ ನಲ್ಲಿ ವಿಡಿಯೊ ಮಾಡಿರುವುದು ಕೂಡಾ ಇದೀಗ ಸುದ್ದಿಯಾಗಿದೆ. ಅಲ್ಲದೆ ಮೊಬೈಲ್ ವಿಡಿಯೊದಲ್ಲಿ ಮಾತನಾಡಿರುವುದು ಜಶೋದಾಬೆನ್ ಎಂದು ಅವರ ಸೋದರ ಅಶೋಕ್ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ.
ಆನಂದಿಬೆನ್ ಪಟೇಲ್ ಈ ರೀತಿಯ ಹೇಳಿಕೆ ನೀಡಿದ್ದಾಗ ನಾವು ಮೊದಲು ನಂಬಲಿಲ್ಲ. ಆದರೆ ಬಳಿಕ ದಿವ್ಯ ಭಾಸ್ಕರ ಎಂಬ ಪತ್ರಿಕೆಯ ಮುಖಪುಟದಲ್ಲಿ ಈ ವಿಚಾರ ಜೂನ್ 19ರಂದು ಪ್ರಕಟವಾಯಿತು. ಹೀಗಾಗಿ ನಾವು ಅಕ್ಕ ಜಶೋದಾಬೆನ್ ಆಡಿರುವ ಮಾತುಗಳ ವಿಡಿಯೊವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಬೇಕಾಯಿತು. ಜಶೋದಾಬೆನ್ ಅವರ ಲಿಖಿತ ಹೇಳಿಕೆಯನ್ನು ಕೂಡ ನಾವು ವಿಡಿಯೊದಲ್ಲಿ ದಾಖಲಿಸಿಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದರು.