ಕುಂದಾಪುರ, ಸೆ26: "ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅಶ್ಲೀಲವಾಗಿ ಬರೆಯುವವರು ನೇರ ಸಂವಾದಕ್ಕೆ ಬನ್ನಿ ಅಲ್ಲೇ ಅವರಿಗೆ ತಕ್ಕ ಉತ್ತರ ನೀಡುತ್ತೇನೆ" ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರೋಧಿಗಳಿಗೆ ತಿರುಗೇಟು ನೀಡಿದ್ರು.
ಹಾಲಾಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು , ಶಾಲಾ ಕಾಲೇಜಿನಲ್ಲಿ ಕೆಲ ತುಂಟ ವಿದ್ಯಾರ್ಥಿಗಳು ಗೋಡೆಯ ಮೇಲೆ ವಿದ್ಯಾರ್ಥಿನಿಯರ ಬಗ್ಗೆ ಕೆಟ್ಟದಾಗಿ ಬರೆಯುತ್ತಿದ್ದರು. ಅದೇ ರೀತಿ ಇವರ ಮನೋಸ್ಥಿತಿ ಕೂಡಾ. ನನ್ನ ವಿರುದ್ದ ಸುಖಾಸುಮ್ಮನೆ ವಾಟ್ಸ್ಪ್ಗಳಲ್ಲಿ ಬರೆಯುತ್ತಿರುವವರು ನನ್ನ ಮೇಲೆ ಏನೆ ಭಿನ್ನಾಭಿಪ್ರಾಯವಿದ್ದರೂ ಸರಿ ಚರ್ಚೆಗೆ ಕರೆಯಲಿ ಸ್ಥಳ ಎಲ್ಲಾದರೂ ಸರಿ ಅಲ್ಲೇ ಅವರಿಗೆ ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ವಿರೋಧಿಗಳಿಗೆ ಸವಾಲು ಹಾಕಿದರು. "ನನ್ನ ರಾಜಕೀಯ ವಿರೋಧಿಗಳು ನಾನು ತಟಸ್ಥನಾಗಿದ್ದೇನೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸವಾಗಿಲ್ಲ ಎಂದು ಆರೋಪಿಸಿದ್ದಾರೆ. ರಾಜಕೀಯದಲ್ಲಿ ಆರೋಪ ಪ್ರತ್ಯಾರೋಪ ಸಾಮಾನ್ಯ. ಅವರೆಲ್ಲರ ಪ್ರಶ್ನೆಗಳಿಗೂ ನನ್ನ ಬಳಿ ಉತ್ತರವಿದೆ ದಾಖಲೆಗಳಿವೆ" ಎಂದಿದ್ದಾರೆ.
ರಾಜಕೀಯ ನಿವೃತ್ತಿ!?
ರಾಜಕೀಯ ನಿವೃತ್ತಿಯಾಗುತ್ತಿರಾ? ಎನ್ನುವ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು "ನಾನು ಮೂರು ಅವಧಿಗೆ ಮಾತ್ರ ಶಾಸಕನಾಗುತ್ತೇನೆ ಎಂದು ತಿಳಿಸಿದ್ದೇ. ಆದರೆ ಅಂದು ನಡೆದ ಒಂದು ಘಟನೆಯಿಂದ ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ನನ್ನ ಮುಂದಿನ ನಡೆಯ ಬಗ್ಗೆ ನನಗೆ ಗೊತ್ತಿಲ್ಲ. ನಾನಿನ್ನು ನಿರ್ಧರಿಸಿಲ್ಲ. ನನ್ನ ಬೆಂಬಲಿಗರ ಅನಿಸಿಕೆ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ" ಎಂದರು.