ಕೋಲಾರ, ಜೂ 21 : ಭಯೋತ್ಪಾದನೆಯ ಚಟುವಟಿಕೆ ಸಂಶಯದ ಮೇಲೆ ಅಂತಾರಾಷ್ಟ್ರೀಯ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಅನುಯಾಯಿ ಒಬ್ಬನನ್ನು ಕೋಲಾರದ ಆರ್ಥಿಕ ಅಪರಾಧ ಮಾದಕ ದ್ರವ್ಯ ನಿಯಂತ್ರಣ ದಳ ವಶಕ್ಕೆ ಪಡೆದಿದೆ. ಬಂಧಿತನನ್ನು ಬೆಂಗಳೂರಿನ ಹೊಸ ಗುಡ್ಡದ ಹಳ್ಳಿ ಮೂಲದ ಚಂದ್ರ ಶೇಖರ್ ೪೨ ಎಂದು ಗುರುತಿಸಲಾಗಿದೆ. ಈತ ಕಳೆದ ನಾಲ್ಕು ತಿಂಗಳಿಂದ ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿ ಗ್ರಾಮದ ಅಂಬರೀಶ್ ಎಂಬುವವರ ಮನೆಯಲ್ಲಿ ವಾಸ ಹೂಡಿದ್ದ.
ಬಂಧಿತ ವ್ಯಕ್ತಿಯೂ ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಮೋದಿ ಮತ್ತು ಅವರ ಮನ್ ಕೀ ಬಾತ್ ಕಾರ್ಯಕ್ರಮಗಳನ್ನು ತೀವ್ರವಾಗಿ ಟೀಕಿಸುತ್ತ ಲಾಡೆನ್ ಗುಣಗಾನ ಮಾಡುತ್ತಿದ್ದ ’ ಲಾಡೆನ್ ನನ್ನ ದೇವರು’ ಪ್ರತಿಯೊಬ್ಬರೂ ಉಗ್ರ ಗಾಮಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ಎಂಬಿತ್ಯಾದಿ ಪೋಸ್ಟ್ ಗಳನ್ನು ಜಾಲತಾಣದಲ್ಲಿ ಹಾಕುತ್ತಿದ್ದ.
ಆರೋಪಿಯನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆಗೊಳಪಡಿಸಿರುವ ಪೊಲೀಸರು ಆತನಿಂದ ೩೫ ಕ್ಕೂ ಹೆಚ್ಚು ಸಿಮ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮಾನಸಿಕ ಅಸ್ವಸ್ಥನಂತೆ ಕಂಡುಬರುತ್ತಿದ್ದ ಚಂದ್ರಶೇಖರ್ ನಡೆಸುತ್ತಿದ್ದ ಸಮಾಜ ವಿದ್ರೋಹ ಚಟುವಟಿಕೆ ಬಗ್ಗೆ ಯಾರಿಗೂ ಸುಳಿವು ಸಿಕ್ಕಿರಲಿಲ್ಲ. ಪ್ರತಿನಿತ್ಯ ಮುಂಜಾನೆಯೇ ಮನೆಯಿಂದ ಹೊರಗೆ ಹೋಗುತ್ತಿದ್ದ ಆತ ತಡರಾತ್ರಿ ಮನೆಗೆ ಬರುತ್ತಿದ್ದ ಈತನ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ.