ಬೆಂಗಳೂರು, ಜೂ 20 : ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ ಕುರಿತು ವೈದ್ಯಕೀಯ ಹಾಗೂ ಜಲಸಂಪನ್ಮೂಲ ಖಾತೆ ಸಚಿವ ಡಿ.ಕೆ.ಶಿವಕುಮಾರ್ ಅವರು ಆಶ್ಚರ್ಯ ಹಾಗೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಘೋಷಿತ ಹಣ ಮತ್ತು ಸುಳ್ಳು ದಾಖಲೆ ಹೊಂದಿರುವ ಆಧಾರದ ಮೇಲೆ ಆರ್ಥಿಕ ಅಪರಾಧ ನ್ಯಾಯಾಲಯ ವಿಚಾರಣೆಗೆ ಹಾಜರಾಗುವಂತೆ ಜೂ 20 ರ ಮಂಗಳವಾರ ಸಚಿವ ಡಿಕೆಶಿಗೆ ಸಮನ್ಸ್ ನೀಡಿತ್ತು.
ತೆರಿಗೆ ಇಲಾಖೆ ಅಧಿಕಾರಿಗಳು ನನ್ನನ್ನೇ ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಹಾಗಾದರೆ ಬೇರೆಯವರ ಮನೆಯಲ್ಲಿ ಡೈರಿ, ಲೆಕ್ಕ ಇಟ್ಟಿಲ್ಲವೇ, ಅದು ಐಟಿ ಅಧಿಕಾರಿಗಳ ಗಮನಕ್ಕೆ ಬರುವುದಿಲ್ಲವೆ, ಅಂತವರ ಮನೆ ಮೇಲೆ ಏಕೆ ದಾಳಿ ಮಾಡುವುದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ ಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕೇಸ್ ನ್ಯಾಯಾಲಯದಲ್ಲಿರುವುದರಿಂದ ನಾನು ಹೆಚ್ಚ ಮಾತನಾಡಲು ಇಚ್ಚಿಸುವುದಿಲ್ಲ ಎಂದ ಅವರು ನನ್ನ ಬಳಿಯೂ ಹಲವು ಡೈರಿಗಳಿವೆ. ನನ್ನ ಕುಟುಂಬಕ್ಕೆ ಮಾನಸಿಕ ಹಿಂಸೆ ನೀಡಲಾಗುತ್ತಿದ್ದು, ನನಗೆ, ನನ್ನ ಸಹೋದರ,ತಾಯಿಗೆ ಎಲ್ಲರಿಗೂ ನೊಟೀಸ್ಗಳನ್ನು ನೀಡಲಾಗುತ್ತಿದೆ. ನನ್ನ ಏಳಿಗೆಯನ್ನು ಸಹಿಸಲಾಗದೆ ನನಗೆ, ನನ್ನ ಕುಟುಂಬದವರಿಗೆ ಮತ್ತು ಸಂಬಂಧಿಕರಿಗೆ ತನಿಖೆ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ. ಅವರೆಲ್ಲರೂ ಏಕೆ ಹೀಗೆ ಮಾಡುತ್ತಿದ್ದಾರೆ ಎಂದು ನನಗೆ ಚೆನ್ನಾಗಿ ಗೊತ್ತಿದೆ. ಕೊನೆಯವರೆಗೆ ಕಾದು ನೋಡುತ್ತೇನೆ ಸಮಯ ಬಂದಾಗ ಮಾತನಾಡುತ್ತೇನೆ ಎಂದರು.