ಸುಬ್ರಮಣ್ಯ, ಜೂ 20: ಕರ್ನಾಟಕ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ದಕ್ಷಿಣಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅಧೀನದಲ್ಲಿ ಯಾವುದೇ ಮಠ ಮಂದಿರವಾಗಲೀ ಇತರ ಶಾಖೆಗಳಾಗಲೀ, ಉಪಶಾಖೆಗಳಾಗಲೀ ಇರುವುದಿಲ್ಲ. ಆದ್ದರಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಭಕ್ತಾದಿಗಳು ಸಲ್ಲಿಸತಕ್ಕ ಹರಿಕೆ, ಸೇವೆ ಮತ್ತು ಕಾಣಿಕೆಗಳನ್ನು ಶ್ರೀ ದೇವಳದ ಕೌಂಟರ್ಗಳು ಅಥವಾ ಕಛೇರಿಯಲ್ಲಿ ಸಂದಾಯ ಮಾಡಿದಲ್ಲಿ ಮಾತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಲ್ಲುತ್ತದೆ. ಶ್ರೀ ದೇವಳದ ಅಧಿಕೃತ ರಶೀದಿ ಹೊರತಾಗಿ ಯಾವುದೇ ಮಠ, ಮಂದಿರ, ನದಿ ತೀರ, ಕಲ್ಯಾಣ ಮಂಟಪ, ಇತ್ಯಾದಿ ಕಡೆಗಳಲ್ಲಿ ನಡೆಸಲ್ಪಡುವ ಸೇವೆಗಳು ತೀರಾ ಖಾಸಗಿಯಾಗಿದ್ದು, ಈ ಸೇವೆಗಳು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಂದಾಯವಾಗಲಾರದು ಎಂದು ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಮತ್ತು ದೇವಳದ ಕಾರ್ಯನಿರ್ವಹಣಾಧಿಕಾರಿ ಎಂ.ಎಚ್.ರವೀಂದ್ರ ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಮಾದ್ಯಮದಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಶ್ರೀ ದೇವಳದಲ್ಲಿ ಭಕ್ತಾಧಿಗಳಿಂದ ನಡೆಸಲ್ಪಡುವ ಸರ್ಪಸಂಸ್ಕಾರ ಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕ ಭಕ್ತಾಧಿಗಳಲ್ಲಿ ಗೊಂದಲಗಳು ಉಂಟಾಗಿತ್ತು.ಶ್ರೀ ದೇವಳದ ಗೋಪುರ ಮತ್ತು ಮುಂಭಾಗದ ರಥಬೀದಿಯ ದೃಶ್ಯಗಳನ್ನು ತೋರ್ಪಡಿಸುತ್ತಾ ಸರ್ಪಸಂಸ್ಕಾರ ಸೇವೆಗೆ ಸಂಬಂಧಿಸಿದಂತೆ ಕ್ಷೇತ್ರದಲ್ಲಿ ಹಲವಾರು ಮದ್ಯವರ್ತಿಗಳ ಮೂಲಕ ಹೆಚ್ಚಿನ ಹಣ ವಸೂಲಿ ಮಾಡಿ ಶೋಷಿಸುವ ಕುರಿತು ವರದಿ ಬಿತ್ತರಿಸಲಾಗಿತ್ತು. ಹಾಗಾಗಿ ಈ ಅವ್ಯವಸ್ಥೆಗೂ ಕುಕ್ಕೆ ದೇವಳಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ದೇವಳದ ಆಡಳಿತವು ಈ ಮೂಲಕ ಸ್ಪಷ್ಟಪಡಿಸಿತು.
ಸಂಪ್ರದಾಯದಂತೆ ಸೇವೆ:
ಶ್ರೀ ದೇವಳದಲ್ಲಿ ನಡೆಸುವ ಸರ್ಪಸಂಸ್ಕಾರ ಸೇವೆಯು ಎರಡು ದಿನಗಳದ್ದಾಗಿದ್ದು ಇದನ್ನು ಮೂರು ಮಂದಿ ಪುರೋಹಿತರು ನಡೆಸುತ್ತಾರೆ. ಆದಿಸುಬ್ರಹ್ಮಣ್ಯದಲ್ಲಿರುವ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಈ ಸೇವೆಗಳು ನಡೆಯುತ್ತದೆ. ದೇವಳದಲ್ಲಿನ ಸೇವಾ ಸಂಪ್ರದಾಯದಂತೆ ಈ ಸೇವೆಯನ್ನು ಕರ್ತೃಗಳ ನಿಯೋಜನೆಯಡಿಯಲ್ಲಿ ಮಾಡಲಾಗುತ್ತಿದೆ. ಸೇವೆಯನ್ನು ನಡೆಸಿದ ಕರ್ತೃವಿಗೆ ಸೇವೆ ಒಂದರ ೬೫೦ ರೂ ನಂತೆ ಕ್ರಿಯಾ ದಕ್ಷಿಣೆಯನ್ನು ದೇವಳದಿಂದ ಪಾವತಿಸಲಾಗುತ್ತಿದೆ. ಸೇವೆಗೆ ನೆರವೇರಿಸಲು ಬರುವ ಭಕ್ತಾದಿಗೆ ಶ್ರೀ ದೇವಳದಿಂದ ಭೋಜನ ಪ್ರಸಾದ ಮತ್ತು ಫಲಹಾರದ ವ್ಯವಸ್ಥೆಗಳನ್ನು ಆದಿಸುಬ್ರಹ್ಮಣ್ಯದಲ್ಲಿರುವ ಸರ್ಪಸಂಸ್ಕಾರ ಭೋಜನಶಾಲೆಯಲ್ಲಿ ಪ್ರತ್ಯೇಕವಾಗಿ ಮಾಡಲಾಗುತ್ತಿದೆ. ಪ್ರಥಮ ದಿನದ ಸರ್ಪಸಂಸ್ಕಾರ ಸೇವೆಯು ಆದಿಸುಬ್ರಹ್ಮಣ್ಯದಲ್ಲಿಯೂ ಮತ್ತು ಎರಡನೇ ದಿನದ ನಾಗಪ್ರತಿಷ್ಠ ಸೇವೆಯನ್ನು ಶ್ರೀ ದೇವಳದ ನಾಗಪ್ರತಿಷ್ಠಾ ಮಂಟಪದಲ್ಲಿ ನೆರವೇರಿಸಿ ಪ್ರಸಾದವನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.