ಉಜಿರೆ, ಜೂ 20: ಚುನಾವಣೆ ಮತ್ತು ಚುನಾವಣೆ ನಂತರದ ರಾಜಕೀಯ ಓಡಾಟಗಳಿಂದ ಬಸವಳಿದಿದ್ದ ಸಿದ್ದರಾಮಯ್ಯ 10 ದಿನಗಳ ಪ್ರಕೃತಿ ಚಿಕಿತ್ಸೆಗಾಗಿ ಧರ್ಮಸ್ಥಳದ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾಲಯಕ್ಕೆ ದಾಖಲಾಗಿ ಅಲ್ಲಿ ಎರಡು ದಿನಗಳನ್ನು ಕಳೆದಿದ್ದಾರೆ. ರಾಜಕೀಯದ ಬಿರುಸಿನ ಕಾರ್ಯಚಟುವಟಿಕೆಯಿಂದ ಶುಗರ್, ಬಿಪಿ ಹೆಚ್ಚಿಸಿಕೊಂಡಿದ್ದ 69ರ ಹರೆಯದ ಸಿದ್ದರಾಮಯ್ಯ ಸದ್ಯ ಮಾಂಸಾಹಾರ ಸಂಪೂರ್ಣ ವರ್ಜ್ಯಸಿದ್ದಾರೆ. ಈಗಾಗಲೇ ಯೋಗಾಭ್ಯಾಸ, ಮಸಾಜ್, ಹಬೆಸ್ನಾನ ಆರಂಭವಾಗಿದ್ದು ಇಲ್ಲಿ ಬೆಳಗ್ಗೆ 6 ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ ಮಾಡಬೇಕಾಗಿದೆ.
ಇನ್ನು ಇಲ್ಲಿ 9 ಗಂಟೆಗೆ ರಾಗಿ ಗಂಜಿ ಬೆಳಗ್ಗಿನ ಉಪಹಾರ ಮುಗಿಸಿದರೆ 11 ಗಂಟೆಗೆ ಹಸಿ ತರಕಾರಿಯೇ ಮಧ್ಯಾಹ್ನದ ಊಟ. ಅಂದರೆ ಹಸಿ ತರಕಾರಿ, ಮೊಳಕೆ ಕಾಳು, ಸಲಾಡ್ ಮತ್ತು ಮಜ್ಜಿಗೆ ಮಾತ್ರ. ಇನ್ನು ಉಪ್ಪು, ಹುಳಿ, ಖಾರ ಯಾವುದೂ ಇಲ್ಲ . ಅನ್ನವೂ ಇಲ್ಲದ ಊಟ. ಬಳಿಕ ಸಂಜೆ 6.30ಕ್ಕೆ ರಾತ್ರಿ ಊಟ ಅಂದರೆ ಅಂದರೆ ಬೇಯಿಸಿದ ತರಕಾರಿ, ಎರಡು ಚಪಾತಿ, ಮಜ್ಜಿಗೆ, ಪಪ್ಪಾಯಿ ಮಾತ್ರ
ಇವೆಲ್ಲದರ ನಡುವೆ , ವಿಶ್ರಾಂತಿ, ಜಲ ಚಿಕಿತ್ಸೆ, ಹೈಡ್ರೋಥೆರಪಿ, ಮಸಾಜ್ ಗಳ ಚಿಕಿತ್ಸೆಗಳು ಪ್ರಾರಂಭವಾಗಿದೆ. ರಾಜಕಾರಣಿ ಅಂದ ಮೇಲೆ ಯಾರಾದರೂ ಭೇಟಿಯಾಗಲು ಬಂದೇ ಬರುತ್ತಾರೆ ಅಂದರೆ ಇಲ್ಲಿ ಯಾರನ್ನೂ ಭೇಟಿಯಾಗಲಿಕ್ಕಿಲ್ಲ. ಇಷ್ಟೇಲ್ಲಾ ಚಿಕಿತ್ಸೆ ಬಳಿಕ ರಾತ್ರಿ ಹತ್ತು ಗಂಟೆಗೆ ನಿದ್ದೆ ಜಾರುತ್ತಿದ್ದಾರೆ ಮಾಜಿ ಸಿಎಂ ಕಳೆದ ಐದು ವರ್ಷಗಳಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಅವರ ಸುತ್ತಮುತ್ತ ಬೆಂಬಲಿಗರು ಕಾರ್ಯಕರ್ತರು, ಅಧಿಕಾರಿಗಳು ರಾಜಕೀಯ ಮುಖಂಡರುಗಳೇ ಗಿಜಿಗುಡುತ್ತಿದ್ದು, ಇಲ್ಲಿ ಅವು ಯಾವುದೂ ಇಲ್ಲದೇ ಶಾಂತವಾಗಿ ಕಾಲ ಕಳೆಯುತ್ತಾ ದೇಹವನ್ನು ದಂಡಿಸುತ್ತಿದ್ದಾರೆ.