ಬಂಟ್ವಾಳ, ಜೂ 19: ಕಳೆದ ಎರಡು ದಿನಗಳಿಂದ ಸುರಿದ ಗಾಳಿ-ಮಳೆಗೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ೫ನೇ ವಾರ್ಡ್ನ ಬಡ್ಡಕಟ್ಟೆ-ಹೊಸಮಾರು ಸಂಪರ್ಕಿಸುವ ಕಿರು ಸೇತುವೆಯೊಂದು ಮುರಿದು ಬಿದ್ದಿದೆ. ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ.
ಕಿರು ಸೇತುವೆಯ ಒಂದು ಭಾಗದ ಆಧಾರ ಸ್ಥಂಬ ತೋಡಿನ ನೀರಿನಲ್ಲಿ ಕೊಚ್ಚಿಹೋಗಿದ್ದು ಪರಿಣಾಮ ಕಿರು ಸೇತುವೆ ಕುಸಿದು ಬಿದ್ದಿದ್ದು, ಹೊಸಮಾರು ಹಾಗೂ ಬಡ್ಡಕಟ್ಟೆ ಮಧ್ಯೆ ಸಂಚಾರದ ಸಂಪರ್ಕ ಕೊಂಡಿ ಕಳಚಿದೆ. ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಬೀಡಿ ಕಾರ್ಮಿಕರು ಈ ಸೇತುವೆಯನ್ನು ಅವಲಂಬಿಸುತ್ತಿದ್ದಾರೆ. ಈ ಕಿರು ಸೇತುವೆಯು 1996 ರಲ್ಲಿ ನಿರ್ಮಾಣಗೊಂಡಿದ್ದು, ಸುಮಾರು 22 ವರ್ಷಗಳ ಕಾಲ ಬಾಳಿಕೆ ಬಂದಿದ್ದ ಈ ಸೇತುವೆ, ಇದೀಗ ಕುಸಿದು ಬಿದ್ದಿದ್ದು, ಈ ಭಾಗದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಸುದ್ದಿ ತಿಳಿದ ಸ್ಥಳೀಯ ಪುರಸಭಾ ಸದಸ್ಯ ಪ್ರವೀಣ್ ಬಿ. ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ, ಇಂಜಿನೀಯರ್ ಡೊಮೆನಿಕ್ ಡಿಮೆಲ್ಲೊ ಅವರು ಕೂಡಾ ಸ್ಥಳಕ್ಕೆ ಆಗಮಿಸಿ, ನಷ್ಟದ ಬಗ್ಗೆ ಅಂದಾಜಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸದಸ್ಯ ಪ್ರವೀಣ್ ಅವರು, ಎಡೆಬಿಡದ ಎರಡು ದಿನಗಳ ಮಳೆಯಿಂದ ಈ ಹಳೆ ಸೇತುವೆ ಒಂದು ಭಾಗದ ಆಧಾರ ಸ್ಥಂಭ ಕೊಚ್ಚಿಹೋಗಿ ಕುಸಿದಿದೆ. ಇದಕ್ಕೆ ತಾತ್ಕಾಲಿಕ ಕಾಲುಸಂಕ ನಿರ್ಮಿಸಲು ಈಗಾಗಲೇ ಸಂಬಂಧಿಸಿದವರಿಗೆ ಸೂಚನೆ ನೀಡಲಾಗಿದೆ. ಶಾಶ್ವತ ಕಿರುಸೇತುವೆ ನಿರ್ಮಾಣಕ್ಕೆ ಶಾಸಕರಿಗೂ ಮನವಿ ಮಾಡಲಾಗುವುದು ಎಂದು ತಿಳಿಸಿದರು.