ಬಂಟ್ವಾಳ, ಜೂ 19 : ಶಾಸಕರಾಗಿ ಚುನಾಯಿತರಾದ ಬಳಿಕ ಮೊದಲ ಬಾರಿ ಬಂಟ್ವಾಳ ಪುರಸಭೆಗಾಗಮಿಸಿ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿದ ಶಾಸಕ ಯು.ರಾಜೇಶ್ ನಾಯ್ಕ್ ಅವರು ಅಧಿಕಾರಿಗಳು,ಜನಪ್ರತಿನಿಧಿಗಳಿಗೆ ನೀತಿಪಾಠ ಮಾಡಿ ಗಮನಸೆಳೆದರು. ಶಾಸಕನಾಗುವ ಮೊದಲು ಒಂದೆರಡು ಬಾರಿ ಗೇಟಿನ ಹೊರಗಡೆ ಪ್ರತಿಭಟನೆಯಲ್ಲಿ ಭಾಗವಹಿಸಿರುವುದನ್ನು ನೆನೆದ ಅವರು ಈಗ ಪುರಸಭೆಯೊಳಗೆ ಜನರ ಧ್ವನಿಯಾಗಿ ಪ್ರವೇಶಿಸುವ ಅವಕಾಶ ಸಿಕ್ಕಿದೆ. ಜನಪ್ರತಿನಿಧಿಗಳು ಐದು ವರ್ಷಕ್ಕೊಮ್ಮೆ ಬದಲಾಗಬಹುದು ಆದರೆ ಅಧಿಕಾರಿಗಳು ತಮ್ಮ ನಿವೃತ್ತಿಯವರೆಗೆ ಸೇವೆ ಮಾಡುವವರು. ಹಾಗಾಗಿ ಯಾವುದೇ ಕೆಲಸಗಳನ್ನು ಅನುಷ್ಠಾನಕ್ಕೆ ತರುವ ಜವಬ್ದಾರಿಯುತ ಹೊಣೆಗಾರಿಕೆ ಅಧಿಕಾರಿಗಳಿದ್ದು ,ಇದನ್ನು ಅರಿತುಕೊಂಡು ಕಾರ್ಯನಿರ್ವಹಿಸುವಂತೆ ಸೂಚಿಸಿದರು.
ಪುರಸಭೆ ಚೆನ್ನಾಗಿದ್ದರೆ ,ಕ್ಷೇತ್ರವು ಚೆನ್ನಾಗಿರುತ್ತೆ: ಬಂಟ್ವಾಳ ಕ್ಷೇತ್ರದ ಹೃದಯಭಾಗವಾದ ಪುರಸಭೆ ಎಲ್ಲಾ ವಿಚಾರದಲ್ಲೂ ಸುಂದರವಾಗಿದ್ದರೆ,ಇಡೀ ಕ್ಷೇತ್ರವೇ ಸುಂದರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟ ಶಾಸಕ ರಾಜೇಶ್ ನಾಯ್ಕ್ ಅವರು ಈ ದೆಸೆಯಲ್ಲಿ ಅಧಿಕಾರಿಗಳ,ಜನಪ್ರತಿನಿಧಿಗಳ ಸಹಕಾರವು ಅಗತ್ಯವಿದ್ದು, ಎಲ್ಲರೂ ಪರಸ್ಪರ ಒಟ್ಟಾಗಿ ದುಡಿದಾಗ ಕ್ಷೇತ್ರದ ಅಭಿವೃದ್ದಿ ಕಾಣಲು ಸಾಧ್ಯವಾಗುತ್ತದೆ ಎಂದರು.
ಒಳಚರಂಡಿಗೆ ಆದ್ಯತೆ : ಪುರಸಭಾ ವ್ಯಾಪ್ತಿಯ ಸಮಗ್ರ ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲು ಬಯಸಿದ್ದೇನೆ.ಇಲ್ಲಿ ಯ ಕೊಳಚೆ ನೀರು ನೇತ್ರಾವತಿ ನದಿ,ಬಾವಿಯನ್ನು ಸೇರುತ್ತಿದ್ದು,ಆದೇ ನೀರನ್ನು ಜನತೆ ಕುಡಿಯಲುಉಪಯೋಗಿಸುತ್ತಿದ್ದಾರೆ. ಈ ಯೋಜನೆಯ ಕುರಿತಾಗಿ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೂ ಚರ್ಚಿಸಿರುವುದಾಗಿ ತಿಳಿಸಿದ ಅವರು ಸ್ವಚ್ಚತೆಗೂ ಗಮನಹರಿಸುವಂತೆ ಸೂಚಿಸಿದರು.ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರು,ಘನ ತ್ಯಾಜ್ಯ ವಿಲೇವಾರಿ ಘಟಕ ಸಹಿತ ಕೆಲ ವಿಚಾರಗಳನ್ನು ಶಾಸಕರ ಗಮನಸೆಳೆದರು.ಅಧ್ಯಕ್ಷ ರಾಮಕೃಷ್ಣ ಆಳ್ವ,ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು ,ಸ್ಥಾಯಿಸಮಿತಿ ಅಧ್ಯಕ್ಷ ವಾಸುಪೂಜಾರಿ ಹಾಗೂ ಸದಸ್ಯರು ಪುರಸಭೆಯವತಿಯಿಂದ ಹೂ ಗುಚ್ಚ ನೀಡಿ ಶಾಸಕರನ್ನು. ಅಭಿನಂದಿಸಿದರೆ.ಪುರಸಭೆಯ ನೌಕರರ ಪರವಾಗಿ ನೌಕರರ ಸಂಘದ ಅಧ್ಯಕ್ಷ ಇಂಜಿನಿಯರ್ ಡೊಮೆನಿಕ್ ಡಿಮೆಲ್ಲೊ ಶಾಸಕರನ್ನು ಅಭಿನಂದಿಸಿದರು.