ಪುತ್ತೂರು, ಜೂ 19 : ವಿವಾಹವೆಂದರೆ ಅಲ್ಲಿ ಸಂತೋಷ -ಸಂಭ್ರಮವಿರಲೇಬೇಕು..ಅದರೆ ಪುತ್ತೂರಿನಲ್ಲೊಂದು ನಡೆದ ವಿವಾಹ ವಿಶೇಷತೆಗಳಿಂದಲೇ ತುಂಬಿತ್ತು. ವಧು ವರರನ್ನು ಕಾರಿನೊಳಗಡೆ ಕುಳ್ಳಿರಿಸಿ ಮನೆಗೆ ಕರೆತಂದು ಆರತಿ ಎತ್ತಿ ಸ್ವಾಗತಿಸುವುದು ಸಾಮಾನ್ಯ. ಆದರೆ ಇದಕ್ಕಿಂತ ಭಿನ್ನವಾಗಿ ಜೆಸಿಬಿಯಲ್ಲೇ ವಧು ವರನನ್ನು ಕರೆತಂದರೆ.. ಹೀಗೊಂದು ವಿವಾಹ ನಡೆದಿದ್ದು, ಪುತ್ತೂರಿನ ಪರ್ಪುಂಜಾ ಶಿವಕೃಪಾ ಆಡಿಟೋರಿಯಂನಲ್ಲಿ. ಕಲ್ಲಕಟ್ಟೆಯ ಚೇತನ್ ಕುಮಾರ್ ಹಾಗೂ ಕೆದಂಬಾಡಿಯ ಮಮತಾ ತಮ್ಮ ವಿವಾಹ ಮುಗಿಸಿ ಸಂಜೆ ವೇಳೆಗೆ ತೆರಳಲು ಕಾರು ಹತ್ತುವ ಬದಲು ಜೆಸಿಬಿ ಹತ್ತಿದ್ದರು.
ಸ್ವತಃ ಜೆಸಿಬಿ ಆಪರೇಟರ್ ಆಗಿರುವ ಮದುಮಗ ಮಧುಮಗಳನ್ನು ಪಕ್ಕದಲ್ಲಿ ಕುಳ್ಳಿರಿಸಿ ನೋಡನೋಡುತ್ತಿದ್ದಂತೆ ಮನೆ ಕಡೆ ತೆರಳಿದರು. ಮಧುಮಗನಿಗೆ ಸ್ನೇಹಿತರು, ವಾಲಗದವರೂ ಸಾಥ್ ನೀಡಿದರು. ಅರ್ಧ ದಾರಿ ಸಾಗಿದ ಬಳಿಕ ವಧು ವರನನ್ನು ಕೆಳಗಿಸಿ ಜೆಸಿಬಿ ಮುಂಭಾಗದ ಬಕೆಟ್ ನಲ್ಲಿ ಕುಳ್ಳಿರಿಸಿದರು. ಇನ್ನೊಬ್ಬಾತ ಜೆಸಿಬಿ ಚಲಾಯಿಸಿದ. ಈ ಸಂಭ್ರಮದ ಮೆರವಣಿಗೆಯಲ್ಲಿ ಪಟಾಕಿಯ ಸ್ವಾಗತ ಬೇರೆ. ಕಲ್ಲಕಟ್ಟದ ಮನೆ ತಲುಪಿದಾಗ ವಧು- ವರನಿಗೆ ಪರೀಕ್ಷೆ ಎದುರಾಗಿತ್ತು. ಮದುಮಗ ತೆಂಗಿನಕಾಯಿ ತುರಿಯಲು ಹಾಗೂ ಮದುಮಗಳಿಗೆ ಮೀನು ಶುಚಿಗೊಳಿಸಲು ತಿಳಿದರು. ಇದಾದ ಬಳಿಕ ಮದುಮಗಳನ್ನು ಅಡುಗೆ ಕೋಣೆಗೆ ಕರೆದೊಯ್ದು ಚಹಾ ಮಾಡಲು ತಿಳಿಸಿದರು.ಅಷ್ಟೇ ಅಲ್ಲದೆ ಆಕೆಯ ಕೈಯಲ್ಲಿ ನೆಂಟರಿಗೆ ಚಜಾ ವಿತರಣೆಯೂ ನಡೆಯಿತು.