ಉಡುಪಿ, ಜೂ 19: ಪೆರ್ಡೂರಿನ ಶೇನರಬೆಟ್ಟು ಎಂಬಲ್ಲಿ ಮೇ 30 ರಂದು ಸಂಶಯಾಸ್ಪದವಾಗಿ ಮೃತಪಟ್ಟ ಮಂಗಳೂರು ಜೋಕಟ್ಟೆಯ ದನದ ವ್ಯಾಪಾರಿ ಹುಸೈನಬ್ಬ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಒಟ್ಟು 11 ಮಂದಿ ಆರೋಪಿಗಳ ಪೈಕಿ ಹಿರಿಯಡ್ಕ ಎಸ್ಸೈ ಡಿ.ಎನ್. ಕುಮಾರ್ ಸೇರಿದಂತೆ ಎಂಟು ಮಂದಿಯ ಜಾಮೀನು ಅರ್ಜಿಯನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತಿರಸ್ಕರಿಸಿದೆ.
ಜೂ.14 ರಂದು ನಡೆದ ಜಾಮೀನು ಅರ್ಜಿ ಪರಿಶೀಲನೆ ವಾದ - ವಿವಾದ ಅಂತಿಮ ಆದೇಶ ಪ್ರಕಟಿಸಿದ್ದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯ ನ್ಯಾಯಧೀಶ ವೆಂಕಟೇಶ್ ನಾಯ್ಕ ಟಿ. ಸೋಮವಾರ ಮೂವರಿಗೆ ಜಾಮೀನು ನೀಡಿ 8 ಮಂದಿಯ ಅರ್ಜಿ ತಿರಸ್ಕೃತಗೊಳಿಸಿ ಆದೇಶ ನೀಡಿದ್ದಾರೆ.
ಹಿರಿಯಡ್ಕ ಪೊಲೀಸ್ ಠಾಣೆಯ ಹೆಡ್ಕಾನ್ ಸ್ಟೇಬಲ್ ಮೋಹನ್ ಕೊತ್ವಾಲ್, ಬಜರಂಗದಳದ ಮುಖಂಡ ಪ್ರಸಾದ್ ಕೊಂಡಾಡಿ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದು, ತಲೆಮರೆಸಿಕೊಂಡಿರುವ ಆರೋಪಿ ತುಕಾರಾಮ್ಗೆ ನಿರೀಕ್ಷಣಾ ಜಾಮೀನು ನೀಡಿ ಆದೇಶ ನೀಡಲಾಗಿದೆ.
ನ್ಯಾಯಾಂಗ ಬಂಧನದಲ್ಲಿರುವ ಮೂವರು ಪೊಲೀಸರು ಜೂ.6ರಂದು ಹಾಗೂ ಏಳು ಮಂದಿ ಬಜರಂಗದಳದ ಕಾರ್ಯಕರ್ತರು ಜೂ.11ರಂದು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.