ಮೈಸೂರು , ಜೂ 18 : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭೂ ಸಂಕಟ ಎದುರಾಗಿದ್ದು, 25 ವರ್ಷಗಳ ಹಳೆಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಮೈಸೂರಿನ ಎರಡನೇ ಸತ್ರ ಪ್ರಧಾನ ನ್ಯಾಯಾಲಯವು ಆದೇಶ ನೀಡಿದೆ. ವರದಿಯ ಪ್ರಕಾರ ಸಿದ್ದರಾಮಯ್ಯ ಈ ಹಿಂದೆ ಡಿಸಿಎಂ ಆಗಿದ್ದ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಕಾಯಿದೆ ಉಲ್ಲಂಘಿಸಿ ವಿಜಯನಗರ 2ನೇ ಹಂತದಲ್ಲಿ ಅಕ್ರಮ ನಿವೇಶನ ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕೀಲರಾದ ಗಂಗರಾಜು ಮತ್ತು ಸಂಗಮೇಶ್ ಎಂಬುವರು ಈ ಪ್ರಕರಣವನ್ನು ಕೈಗೆತ್ತಿಕೊಂಡು ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ರಾಜ್ಯಪಾಲರ ಒಪ್ಪಿಗೆ ಕೇಳಿದ್ದರು. ಆದರೆ ರಾಜ್ಯಪಾಲರು ಒಪ್ಪಿಗೆ ನೀಡಿರಲಿಲ್ಲ. ಆದರೆ ಇದೀಗ ಈ ದೂರಿನ ಸುದೀರ್ಘ ವಿಚಾರಣೆ ಬಳಿಕ ನ್ಯಾಯಾಲಯ ಎಫ್ಐಆರ್ ದಾಖಲಿಸಲು ಸೂಚಿಸಿದೆ. ವಕೀಲ ಗಂಗರಾಜು, ಸಂಗಮೇಶ್ ಎಂಬುವವರು ಐಪಿಸಿ ಸೆಕ್ಷನ್ 120ಬಿ, 197, 166, 167, 169, 200, 417, 409, 420, 468ರಡಿ ಪ್ರಕರಣ ದಾಖಲಿಸಿದ್ದರು. ಸದ್ಯ ಲಕ್ಷ್ಮೀಪುರಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಲಿದೆ.