ಬೆಂಗಳೂರು, ಜೂ 18: ವಿವಾದಾತ್ಮಕ ಹೇಳಿಕೆ ನೀಡಿ ಸದಾ ಸುದ್ದಿಯಲ್ಲಿರುವ ಶ್ರೀರಾಮ ಸೇನೆ ಮುಖಸ್ಥ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ವಿವಾದ ಕಿಡಿ ಹಚ್ಚಿದ್ದಾರೆ. ಭಾನುವಾರ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ , ಗೌರಿ ಹತ್ಯೆ ಪ್ರಕರಣಕ್ಕೂ ಶ್ರೀರಾಮ ಸೇನೆಗೂ ಸಂಬಂಧವಿದೆ ಎಂದು ಮಾಧ್ಯಮಗಳು ಊಹಾಪೋಹ ವರದಿ ಮಾಡುತ್ತಿವೆ. ಆದರೆ, ಹತ್ಯೆಗೂ ನಮ್ಮ ಸಂಘಟನೆಗೂ ಯಾವುದೇ ಸಂಬಂಧವಿಲ್ಲ. ಆದರೆ ಇದನ್ನು ಪರೋಕ್ಷವಾಗಿ ಹಿಂದೂ ಸಂಘಟನೆಗಳ ಮೇಲೆ ಹೇರುವ ಹುನ್ನಾರ ನಡೆದಿದ್ದು, ಇದು ಸರಿಯಲ್ಲ ಎಂದು ಹೇಳಿದ್ದಾರೆ.
ಬಳಿಕ ಗೌರಿಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ವಿರುದ್ಧ ಟೀಕೆ ಮಾಡುತ್ತಿರುವವರ ಕಾಂಗ್ರೆಸ್ , ನಟ ಪ್ರಕಾಶ್ ರೈ ವಿರುದ್ಧ ವಾಗ್ದಾಳಿ ನಡೆಸಿದ ಅವರು , ಗೌರಿ ಲಂಕೇಶ್ ಹತ್ಯೆಗೂ ಪ್ರಧಾನಿ ಮೋದಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಗೌರಿ ಲಂಕೇಶ್ ಹತ್ಯೆ ನಡೆದಿರುವುದು ಕರ್ನಾಟಕದಲ್ಲಿ. ಆಗ ರಾಜ್ಯ ಸರ್ಕಾರಕ್ಕೆ ಜೀವವಿರಲಿಲ್ಲವೇ. ರಾಜ್ಯದಲ್ಲಿ ನಡೆಯುವ ಹತ್ಯೆಗಳಿಗೆ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯೇ ಹೊಣೆಯಾದರೆ ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ 2 , ಮಹಾರಾಷ್ಟ್ರದಲ್ಲಿ 2 ಹೀಗೆ ಒಟ್ಟು ನಾಲ್ಕು ಹತ್ಯೆಗಳಾದವು. ಆಗ ಯಾರೂ ಈ ಬಗ್ಗೆ ದ್ವನಿ ಎತ್ತಲಿಲ್ಲ ಏಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ಸಂದರ್ಭ ಕರ್ನಾಟಕದಲ್ಲಿ ಒಂದು ನಾಯಿ ಸತ್ತರೂ ಅದಕ್ಕೆ ಪ್ರಧಾನಿ ಮೋದಿ ಹೊಣೆಯೇ ಎಂದು ಮುತಾಲಿಕ್ ಕಿಡಿಕಾರಿದ್ದರು.
ನಾಯಿ ಸತ್ತರೂ ಅದಕ್ಕೆ ಪ್ರಧಾನಿ ಹೊಣೆಯೇ ಎಂಬ ಮುತಾಲಿಕ್ ಹೇಳಿಕೆ ಕುರಿತಂತೆ ವಿವಾದ ಹುಟ್ಟಿಕೊಂಡ ತಕ್ಷಣ ಸ್ಪಷ್ಟನೆ ನೀಡಿರುವ ಮುತಾಲಿಕ್, ಗೌರಿ ಲಂಕೇಶ್ ಹತ್ಯೆಯನ್ನು ನಾಯಿಗೆ ಹೋಲಿಕೆ ಮಾಡಿಲ್ಲ. ಆದರೆ ಕರ್ನಾಟಕದಲ್ಲಿ ನಡೆಯುವ ಪ್ರತಿ ಘಟನೆಗೂ ಪ್ರಧಾನಿ ಮೋದಿ ಹೇಗೆ ಕಾರಣರಾಗುತ್ತಾರೆ ಎಂದು ಪ್ರಶ್ನಿಸಿದ್ದೆಯಷ್ಟೇ ಎಂದು ಹೇಳಿ ವಿವಾದ ತಣ್ಣಾಗಾಗುವಂತೆ ಮಾಡಿದ್ದಾರೆ.