ಮಂಗಳೂರು , ಜೂ 18 : ರಾಜಕಾಲುವೆ ಒತ್ತುವರಿ ತೆರವು ಮಾಡುವ ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಕಾರ್ಯಕ್ಕೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ ಕೊಟ್ಟಿದೆ. ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆಯ ಒತ್ತುವರಿ ತೆರವು ಪ್ರಶ್ನಿಸಿ ಖಾಸಗಿ ಕಾಲೇಜು ಸಮೂಹ ಸಂಸ್ಥೆಗಳ ಮುಖ್ಯಸ್ಥರೊಬ್ಬರು ನಗರದ ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಕಾರ್ಯಾಚರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.ಈ ಆದೇಶವನ್ನು ಪ್ರಶ್ನಿಸಿ ಜಿಲ್ಲಾಡಳಿತ ಜೂ 18 ರ ಸೋಮವಾರ ನ್ಯಾಯಾಲಯದ ಮೊರೆ ಹೋಗುವ ಸಾಧ್ಯತೆ ಇದೆ. ಮಂಗಳೂರಿನಲ್ಲಿ ಮೇ 29ರಂದು ಸುರಿದ ಮಹಾ ಮಳೆಗೆ ನಗರದ ರಾಜಾಕಾಲುವೆಗಳು ಉಕ್ಕಿ ಹರಿದು ಮಂಗಳೂರು ನಗರ ಜಲಾವೃತಗೊಂಡಿತ್ತು. ರಾಜಕಾಲುವೆಗಳ ಒತ್ತುವರಿಯಾಗಿರುವುದರಿಂದ ಕೃತಕ ಪ್ರವಾಹ ಉಂಟಾಗಿದೆ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಒತ್ತುವರಿ ತೆರವುಗೊಳಿಸಲು ಮುಂದಾಗಿದ್ದು ಕಾರ್ಯಾಚರಣೆ ಸಂದರ್ಭ ಹೆದ್ದಾರಿ ಬದಿಯಲ್ಲಿರುವ ಕಾಲೇಜು ಬಳಿಯಲ್ಲೂ ಕಾರ್ಯಾಚರಣೆಗೆ ಮುಂದಾಗಿತ್ತು. ಆದರೆ ತೆರವು ಕೆಲಸವನ್ನು ನಡೆಸುವ ಮುನ್ನ ನೋಟಿಸ್ ನೀಡಿಲ್ಲ. ಹಾಗಾಗಿ ಈ ಕಾರ್ಯಾಚರಣೆಗೆ ತಡೆಯಾಜ್ಞೆ ನೀಡಬೇಕು ಎಂದು ಮುಖ್ಯಸ್ಥರು ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.