ಮಂಗಳೂರು, ಡಿ.16 (DaijiworldNews/PY): ಕೊಡಿಯಾಲ್ಬೈಲ್ನ ಪಿವಿಎಸ್ ಸರ್ಕಲ್ ಬಳಿ ಇರುವ ಕುದ್ಮಾಲ್ ರಂಗರಾವ್ ಮಹಿಳಾ ಹಾಸ್ಟೆಲ್ನ ಹಳೆಯ ಕಟ್ಟಡ ಶಿಥಿಲಗೊಂಡಿದ್ದರಿಂದ, ಅದನ್ನು ಖಾಲಿ ಮಾಡಲಾಗಿದ್ದು, ಆ ಸ್ಥಳದಲ್ಲಿ 8 ಕೋಟಿ. ರೂ. ವೆಚ್ಚದ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು.
ದೂರದ ಸ್ಥಳಗಳಿಂದ ಬಂದಿರುವ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ಬಾಲಕಿಯರಿಗೆ ಉಚಿತ ಆಹಾರ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಲು ಬಹಳ ಹಿಂದೆಯೇ ನಿರ್ಮಿಸಲಾದ ಹಾಸ್ಟೆಲ್ ಕೆಟ್ಟ ಸ್ಥಿತಿಯಲ್ಲಿತ್ತು. ಆದ್ದರಿಂದ ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮೂರು ವರ್ಷಗಳ ಹಿಂದೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಮೂರು ವರ್ಷಗಳ ಹಿಂದೆ, ಕಟ್ಟಡದ ಚಾವಣಿಯಿಂದ ಕಾಂಕ್ರೀಟ್ ತುಂಡುಗಳು ಬೀಳಲು ಆರಂಭವಾಗಿದ್ದು, ಕಟ್ಟಡವು ವಾಸಕ್ಕೆ ಯೋಗ್ಯವಲ್ಲಿ ಎಂದಯ ತಜ್ಞರು ಎಚ್ಚರಿಕೆ ನೀಡಿದ್ದರು.
ಜಿಲ್ಲೆಯಲ್ಲಿ 29 ಹಾಸ್ಟೆಲ್ಗಳಿದ್ದು, ಅವುಗಳಲ್ಲಿ 10 ಮೆಟ್ರಿಕ್ ನಂತರದ ವಿದ್ಯಾರ್ಥಿ ಹಾಸ್ಟೆಲ್ಗಳು ಮತ್ತು 19 ಮೆಟ್ರಿಕ್ ಪೂರ್ವ ಹಾಸ್ಟೆಲ್ಗಳಿವೆ. ಸುಮಾರು 800 ವಿದ್ಯಾರ್ಥಿಗಳು ಆ ಹಾಸ್ಟೆಲ್ಗಳಲ್ಲಿ ಉಳಿಯಬಹುದು. ಆದರೆ ಹಾಸ್ಟೆಲ್ ವಸತಿಗಾಗಿ ಪ್ರತಿವರ್ಷ ಸ್ವೀಕರಿಸುವ ಅರ್ಜಿಗಳ ಸಂಖ್ಯೆ ಸಾಕಷ್ಟು ಹೆಚ್ಚಾಗಿದ್ದು, ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಒದಗಿಸಲಾಗುತ್ತದೆ. ನಗರದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇರುವುದರಿಂದ, ಹಾಸ್ಟೆಲ್ಗಳಲ್ಲಿ ಸ್ಥಳಾವಕಾಶವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ತಿಳಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಉಪನಿರ್ದೇಶಕ ಪಾಪ ಭೋವಿ, "ಕುದ್ಮಾಲ್ ರಂಗರಾವ್ ಮಹಿಳಾ ಹಾಸ್ಟೆಲ್ ಕಟ್ಟಡವನ್ನು ನೆಲಸಮ ಮಾಡಲಾಗಿದ್ದು, ಅದರ ಸ್ಥಾನದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಬರಲಿದೆ. ಹೊಸ ಕಟ್ಟಡ ನಿರ್ಮಾಣವು 18 ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಇದರಲ್ಲಿ ಸುಮಾರು 300 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು" ಎಂದರು.