ಸುಳ್ಯ, ಜೂ 17: ಸುಳ್ಯ ಮಡಪ್ಪಾಡಿಯ ಕಿಲಾರ್ ಮಲೆ ಮೀಸಲು ಅರಣ್ಯದೊಳಕ್ಕೆ ನಕ್ಸಲ್ ಶೋಧ ಕಾರ್ಯಾಚರಣೆಗೆ ತೆರಳಿದ್ದ ಎಎನ್ಎಫ್ ಸಿಬ್ಬಂದಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಭದ್ರಾವತಿ ಮೂಲದ ರಂಗಸ್ವಾಮಿ ಮೃತರು. ಕೂಂಬಿಂಗ್ ನಡೆಸುತ್ತಿರುವ ವೇಳೆ ತಂಡದ ಮುಖ್ಯಪೇದೆ ರಂಗಸ್ವಾಮಿ ಹೃದಯಾಘಾತದಿಂದ ಅಸ್ವಸ್ಥಗೊಂಡು ಕುಸಿದು ಬಿದ್ದರು. ಇದನ್ನು ಗಮನಿಸಿದ ಇತರ ಯೋಧರು ಸ್ಥಳಕ್ಕೆ ಬಂದು ಮೇಲಕ್ಕೆ ಎತ್ತಿದರು. ಬಳಿಕ ಪ್ರಥಮ ಚಿಕಿತ್ಸೆಯನ್ನು ಯೋಧರೇ ನಡೆಸಿದರು. ಈ ಹೊತ್ತಿಗೆ ಅವರು ಕೊನೆಯುಸಿರೆಳೆದ್ದಿದ್ದರೆಂದು ತಿಳಿದು ಬಂದಿದೆ.
ಬಳಿಕ ನಕ್ಸಲ್ ನಿಗ್ರಹದಳದ ಕಮಾಡೆಂಟ್ಗೆ ತಿಳಿಸಿ, ಮೃತ ಯೋಧನನ್ನು ಕೋಟೆಗುಡ್ಡೆಯ ಮಾಯಿಲ ಕೋಟೆ ಎಂಬ ಸ್ಥಳದಿಂದ ಪುಟ್ಟಣ್ಣ ಗೌಡ ಅವರ ಮನೆ ಇದ್ದ ಸ್ಥಳಕ್ಕೆ ಸುಮಾರು 2 ಕಿ.ಮೀ ದೂರ ಹೊತ್ತುಕೊಂಡೇ ದಟ್ಟ ಕಾಡಿನ ಮಧ್ಯೆ ಧಾವಿಸಿದರು. ಬಳಿಕ ಅಂಬ್ಯುಲೆನ್ಸ್ನಲ್ಲಿ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತರಲಾಯಿತು.ಎಎನ್ಎಫ್ ಯೋಧ ರಂಗಸ್ವಾಮಿ ಭದ್ರಾವತಿ ಮೂಲದವರಾಗಿದ್ದು, ಕಾರ್ಕಳದಲ್ಲಿ ನಕ್ಸಲ್ ನಿಗ್ರಹದಳದಲ್ಲಿ ಯೋಧರಾಗಿ ಸೇವೆಸಲ್ಲಿಸುತ್ತಿದ್ದರು. ಮಡಪ್ಪಾಡಿ ಗ್ರಾಮದ ಹಾಡಿಕಲ್ಲು ಜಯರಾಮ ಎಚ್ ಬಿ ಅವರಿಗೆ ಸೇರಿದ ತೋಟದ ಮನೆಯ ಶೆಡ್ನಲ್ಲಿ ಶಂಕಿತ ನಕ್ಸಲರು ಪತ್ತೆಯಾದ ವರದಿ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಎಎನ್ಎಫ್ ಹಾಗೂ ಎನ್ಎಸ್ ಪಡೆ ಜಂಟಿಯಾಗಿ ಕೂಂಬಿಂಗ್ ಕಾರ್ಯಚರಣೆಗೆ ಇಳಿದಿತ್ತು.