ಬೆಂಗಳೂರು, ಜೂ16: ಕೇವಲ ಒಂದು ವರ್ಷ ಯಾಕೆ..?, ಮುಂದಿನ 5 ವರ್ಷವೂ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಲಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರವನ್ನು ಯಾರು ಅಲುಗಾಡಿಸಲು ಆಗಲ್ಲ ಎಂದು ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿಎಸ್ವೈ, ಮೈತ್ರಿ ಸರ್ಕಾರ ಅವರದ್ದೇ ಇದೆಯಲ್ವಾ. ಒಂದು ವರ್ಷ ಏಕೆ, 5 ವರ್ಷವೂ ಅವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ವಿರೋಧ ಪಕ್ಷದಲ್ಲಿದ್ದು ನಮ್ಮ ಕೆಲಸವನ್ನು ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದೇ ವೇಳೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದಲ್ಲಿ ಯಾವುದೇ ಸಂಘಟನೆ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳಬೇಕು. ಹತ್ಯೆ ಮಾಡಿದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಹೇಳಿದ್ದಾರೆ.