ಬೆಂಗಳೂರು, ಜೂ16: ನಾನು ಕಳೆದ ಸಾರಿ ಸಾಲ ಮನ್ನಾ ಮಾಡಲಿಲ್ಲವೇ..? ನಾನು ಸಾಲ ಮನ್ನಾದ ಪರವಾಗಿದ್ದೇನೆ. ಯಾವುದೇ ಕಾರಣಕ್ಕೂ ಸಾಲಮನ್ನಾಗೆ ನನ್ನ ವಿರೋಧ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಒಂದು ವರ್ಷ ನನ್ನನ್ನು ಯಾರೂ ಟಚ್ ಮಾಡಲಾಗದು ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿಎಂ ಏನು ಹೇಳಿದ್ದಾರೋ ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ. ಅವರು ಏನಕ್ಕೆ ಹೇಳಿದ್ದಾರೋ ನನಗೆ ಅರ್ಥ ಆಗಿಲ್ಲ. ಅರ್ಥ ಆಗುವುದು ಬೇಡ ಎಂದು ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಆಸಕ್ತಿ ಇಲ್ಲ, ನಾಯಕರು ಕುಳಿತು ಅದರ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುತ್ತಾರೆ. ಸಂಪುಟ ವಿಸ್ತರಣೆ ಮಾಡುತ್ತೇವೆ. ಈಗಲೇ ಮಾಡುತ್ತೇವೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ನಿಗಮ ಮಂಡಳಿ ಅಧ್ಯಕ್ಷರ ನೇಮಕ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.