ಮಂಗಳೂರು, ಡಿ.15 (DaijiworldNews/MB) : ಬಿಜೈನ ಪಾರ್ಟ್ಮೆಂಟ್ನ ಗೋಡೆಯ ಮೇಲೆ ಮತ್ತು ನ್ಯಾಯಾಲಯದ ಸಮೀಪದಲ್ಲಿದ್ದ ಗೋಡೆಯ ಮೇಲೆ ಪ್ರಚೋದನಕಾರಿ ಬರಹ ಬರೆದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು ಈಗ ಪೋಲಿಸರು ನಾಲ್ಕನೇ ಆರೋಪಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಆಯುಕ್ತರು ಪ್ರತಿಯೊಂದು ದೃಷ್ಟಿಕೋನದಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದು "ತನಿಖೆ ಆರಂಭಿಕ ಹಂತದಲ್ಲಿರುವುದರಿಂದ, ಒಂದು ತೀರ್ಮಾನಕ್ಕೆ ಬರುವುದು ತುಂಬಾ ಕಷ್ಟ" ಎಂದು ಹೇಳಿದ್ದಾರೆ.
ಮೂರನೇ ಆರೋಪಿ ಸಾದತ್ (50)ನನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ನಗರದಲ್ಲಿ 18,500 ಸಿಸಿಟಿವಿ ಕ್ಯಾಮೆರಾಗಳಿವೆ ಎಂದು ಆಯುಕ್ತರು ಮಾಹಿತಿ ನೀಡಿದರು. ಆದರೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದವರು ಅದರ ನಿರ್ವಹಣೆಗೆ ಮಹತ್ವ ನೀಡಬೇಕಾಗಿದೆ.
ಮುಂದಿನ ಪರಿಶೀಲನಾ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.