ಉಡುಪಿ, ಜೂ16: ರಂಜಾನ್ ಹಬ್ಬ ಹಿನ್ನೆಲೆಯಲ್ಲಿ ಇಂದು ಮುಸ್ಲಿಂ ಬಾಂಧವರು ಪೇಜಾವರ ಶ್ರೀಗಳನ್ನು ಭೇಟಿಯಾಗಿ, ಹಬ್ಬದ ಶುಭಾಶಯವನ್ನು ಸಲ್ಲಿಸಿ ಫಲ, ಖರ್ಜೂರವನ್ನು ನೀಡಿ ಗೌರವಿಸಿದ್ದಾರೆ.
ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಪೇಜಾವರ ಸ್ವಾಮೀಜಿ, ಈ ಬಾರಿ ಬೇರೆ ಕಾರ್ಯಕ್ರಮಗಳು ನಿಗಧಿಯಾಗಿದ್ದರಿಂದ ಇಫ್ತಾರ್ ಕೂಟ ಏರ್ಪಡಿಸಲು ಸಾಧ್ಯವಾಗಿಲ್ಲ. ಬದಲಾಗಿ ಸ್ನೇಹ ಕೂಟವನ್ನು ಏರ್ಪಡಿಸಬಹುದು. ಇಫ್ತಾರ್ ಕೂಟವೇ ಆಗಬೇಕಿಲ್ಲ, ಸ್ನೇಹ ಕೂಟ ಯಾವಾಗ ಬೇಕಾದರೂ ಮಾಡಬಹುದು ಎಂದು ಹೇಳಿದ್ದಾರೆ.
ಈ ಬಾರಿಯ ಸ್ನೇಹ ಕೂಟಕ್ಕೆ ಯಾರ ವಿರೋಧವು ಇರಲಿಲ್ಲ. ಸಂಘದ ಪ್ರಮುಖರೇ ನಮ್ಮ ವಿರೋಧವಿಲ್ಲ ಎಂದು ಹೇಳಿದ್ದರು. ಆದರೆ ಕಳೆದ ಬಾರಿ ಹಿಂದೂಗಳಲ್ಲೇ ಕೆಲವರು ನೀವು ಮಾಡಿದ್ದು ತಪ್ಪು ಎಂದು ಹೇಳಿದ್ದರು. ಉತ್ತರ ಭಾರತ ಪ್ರವಾಸದಲ್ಲಿದ್ದರಿಂದ ಈ ಭಾರೀ ಅವಕಾಶ ಸಿಕ್ಕಿಲ್ಲ. ಬೇರೆ ಕಾರ್ಯಕ್ರಮಗಳು ಇದ್ದವು. ಹೀಗಾಗಿ ರಂಜಾನ್ ಸಮಯದಲ್ಲಿ ಇಫ್ತಾರ್ ಕೂಟ ಮಾಡುವುದಕ್ಕೆ ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಸ್ನೇಹ ಕೂಟ ಮಾಡುತ್ತೇವೆ. ಕ್ರೈಸ್ತರು, ಮುಸಲ್ಮಾನರನ್ನು ಈ ಸ್ನೇಹ ಕೂಟಕ್ಕೆ ಕರೆಯುತ್ತೇವೆ. ಯೋಗ್ಯ ಸಂದರ್ಭ ನೋಡಿ ಸ್ನೇಹ ಕೂಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭ ಮಾತನಾಡಿದ ಮುಸ್ಲಿಂ ಮುಖಂಡ ಅನ್ಸಾರ್ ಅಹಮ್ಮದ್ ಪ್ರತಿವರ್ಷದಂತೆ ಈ ಬಾರಿಯು ರಂಜಾನ್ ದಿನದಂದು ಸ್ವಾಮೀಜಿಗೆ ಫಲ ಸಲ್ಲಿಸಿ ಆಶೀರ್ವಾದ ಪಡೆದಿದ್ದೇವೆ ಎಂದು ಹೇಳಿದರು.