ಕಾಸರಗೋಡು, ಡಿ. 14 (DaijiworldNews/SM): ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯವಾಗಿದೆ. ನಡೆದ ಚುನಾವಣೆಯಲ್ಲಿ ಶೇಕಡಾ 76.69 ಮತದಾನವಾಗಿದೆ. ಆದರೆ ಅಂತಿಮ ಅಂಕಿ ಅಂಶ ಇನ್ನೂ ಲಭಿಸಬೇಕಿದೆ.
ಬೆಳಿಗ್ಗೆ ಆರಂಭಗೊಂಡ ಮತದಾನ ಸಂಜೆ 6 ಗಂಟೆ ತನಕ ನಡೆಯಿತು. ಸಮಯ ಕಳೆದರೂ ಮತಗಟ್ಟೆಯಲ್ಲಿ ಸರದಿ ಸಾಲು ಕಂಡು ಬರುತ್ತಿತ್ತು. ಮಧ್ಯಾಹ್ನ ತನಕ ಬಿರುಸಿನ ಮತದಾನ ನಡೆದರೆ ಬಳಿಕ ನಿಧಾನಗತಿಯಲ್ಲಿ ಮತದಾನ ನಡೆದಿದೆ. ಮಧ್ಯಾಹ್ನ ಒಂದು ಗಂಟೆ ವೇಳೆಗೆ ಮತದಾನದ ಪ್ರಮಾಣ ಶೇಕಡಾ 50 ದಾಟಿತ್ತು. ಜಿಲ್ಲಾ ಪಂಚಾಯತ್, ಬ್ಲಾಕ್, ಗ್ರಾಮ ಪಂಚಾಯತ್ ಹಾಗೂ ನಗರಸಭೆಗಳಿಗೆ ಚುನಾವಣೆ ನಡೆಯಿತು. ಇನ್ನು 2015 ರಲ್ಲಿ 78. 46 ಶೇಕಡಾ ಮತದಾನವಾಗಿತ್ತು.
16 ರಂದು ನಡೆಯಲಿದೆ ಮತ ಎಣಿಕೆ:
ಇನ್ನು ಇಂದು ನಡೆದ ಮತ ಎಣಿಕೆ ಡಿಸೆಂಬರ್ 16ರಂದು ಬೆಳಿಗ್ಗೆ 8 ಗಂಟೆಯಿಂದ ಜಿಲ್ಲೆಯ 9 ಕೇಂದ್ರಗಳಲ್ಲಿ ನಡೆಯಲಿದೆ. ಜಿಲ್ಲಾ , ಬ್ಲಾಕ್ ಮತ್ತು ಗ್ರಾಮ ಪಂಚಾಯತ್ ಗಳ ಮತ ಎಣಿಕೆ ಬೋವಿಕ್ಕಾನ ಬಿ ಎ ಆರ್ ಎಚ್ ಎಸ್ ಶಾಲೆ, ಕುಂಬಳೆ ಸರಕಾರಿ ಹಯರ್ ಸೆಕಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ಕಾಞ0 ಗಾಡ್ ದುರ್ಗಾ ಹಯರ್ ಸೆಕಂಡರಿ ಶಾಲೆ, ಪರಪ್ಪ ಸರಕಾರಿ ಹೈಸ್ಕೊಲ್, ಪಡನ್ನಕ್ಕಾಡ್ ನೆಹರೂ ಕಾಲೇಜು ಹಾಗೂ ನಗರಸಭಾ ಮತ ಎಣಿಕೆ ಹೊಸದುರ್ಗ ಸರಕಾರಿ ಹಯರ್ ಸೆಕಂಡರಿ ಶಾಲೆ, ಕಾಸರಗೋಡು ಸರಕಾರಿ ಕಾಲೇಜು, ನೀಲೇಶ್ವರ ರಾಜಸ್ ಹಯರ್ ಸೆಕಂಡರಿ ಶಾಲೆಯಲ್ಲಿ ಮತ ಎಣಿಕೆ ನಡೆಯಲಿದೆ.