ಮಂಗಳೂರು, ಜೂ15: ಹಿರಿಯ ವ್ಯಕ್ತಿಗಳನ್ನು ಪೀಡಿಸುವ ಮತ್ತು ಹಿಂಸಿಸುವ ನಗರಗಳ ಪಟ್ಟಿಯಲ್ಲಿ ಇಡೀ ದೇಶದಲ್ಲಿಯೇ ಮಂಗಳೂರು ನಗರ ಮುಂದಿದೆ ಎಂದು ತಿಳಿದುಬಂದಿದೆ.
ಹೆಲ್ಪ್ ಏಜ್ ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಮಂಗಳೂರಿನಲ್ಲಿ ಶೇ. 47 ಮಂದಿಯಷ್ಟು ಹಿರಿಯರು ಶೋಷಣೆಗೆ, ಹಿಂಸೆಗೆ ಒಳಗಾಗುತ್ತಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಹೆಲ್ಪ್ ಏಜ್ ದೇಶಾದ್ಯಂತ 23 ನಗರಗಳ 5,014 ಹಿರಿಯ ನಾಗರಿಕರನ್ನು ಸಂದರ್ಶಿಸಿತು. ಇದರಲ್ಲಿ ಮಂಗಳೂರು ನಗರ ಮೊದಲ ಸ್ಥಾನದಲ್ಲಿದೆ ಎಂದು ಸಮೀಕ್ಷೆ ಹೇಳಿದೆ.
ದೌರ್ಜನ್ಯ ಸ್ವರೂಪದ ,ತೀವ್ರತೆ ಹಾಗೂ ಇದರ ಹಿಂದಿನ ಕಾರಣಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಈ ಸಮೀಕ್ಷೆಯಲ್ಲಿ ಶೇ.50ರಷ್ಟು ಮಂದಿ ಪುತ್ರರಿಂದಲೇ ನಿಂದನೆಗೆ ಒಳಗಾಗುತ್ತೇವೆ ಎಂದು ಹೇಳಿದರೆ, ಶೇ.34ರಷ್ಟು ಮಂದಿ ಸೊಸೆಯಂದಿರಿಂದ ಶೋಷಣೆಗೆ ಒಳಗಾಗುತ್ತಿದ್ದೇವೆ ಅಂತ ಹಿರಿಯ ವ್ಯಕ್ತಿಗಳು ತಿಳಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಮೊಬೈಲ್ ಫೋನ್ಗಳು ಮತ್ತು ಕಂಪ್ಯೂಟರ್ಗಳಿಂದ ಮಕ್ಕಳು ಮತ್ತು ಮೊಮ್ಮಕ್ಕಳು ಹಿರಿಯರೊಂದಿಗೆ ಕಳೆಯುವ ಸಮಯ ಕಡಿಮೆಯಾಗಿದೆ ಎಂದು ಶೇ.60ರಷ್ಟು ಮಂದಿ ಹೇಳಿದ್ದಾರೆ. ಶೇ.85 ರಷ್ಟು ಹಿರಿಯರು ತಮ್ಮ ಕುಟುಂಬದೊಂದಿಗೆ ವಾಸಿಸಲು ಇಷ್ಟಪಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲ ಹಿರಿಯರು ವೈಯಕ್ತಿಕವಾಗಿ ಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಪುತ್ರರು ಅಥವಾ ಸೊಸೆಯಂದಿರಿಂದ ಹೆಚ್ಚು ಕಿರುಕುಳ ಅನುಭವಿಸುತ್ತಿದ್ದೇವೆ ಎಂದು ಹಿರಿಯ ಜೀವಗಳು ಹೇಳಿಕೊಂಡಿವೆ ಎಂದು ಸಮೀಕ್ಷೆ ಹೇಳಿದೆ.