ಬಂಟ್ವಾಳ, ಜೂ15: ಐತಿಹಾಸಿಕ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕೊಡಿಮರ ವಿಚಾರದಲ್ಲಿ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದು, ಈ ವಿಚಾರವಾಗಿ ದೇಗುಲಕ್ಕೆ ಭೇಟಿ ನೀಡಿ ತಾಯಿಯ ಮೊರೆ ಹೋಗಿದ್ದಾರೆ.
ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಕ್ಷೇತ್ರದ ಮುಂಭಾಗದಲ್ಲಿ ಕೊಡಿ ಮರವೊಂದನ್ನು (ಧ್ವಜಸ್ತಂಭ) ಪ್ರತಿಷ್ಠಾಪಿಸಲಾಗಿದೆ. ಈ ಧ್ವಜಸ್ತಂಭಕ್ಕಾಗಿ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿರುವ ಮರವನ್ನು ಕಡಿಯಲಾಗಿತ್ತು. ಕೊಡಿಮರಕ್ಕೆಂದು ಕಡಿಯಲಾದ ಮರದ ಬೆಲೆ ಸುಮಾರು 21 ಲಕ್ಷ.ರೂ ಆಗಿತ್ತು. ಕೊಡಗಿನ ಸಂಪಾಜೆ ಎಂಬ ಅರಣ್ಯದಿಂದ ಮರವನ್ನು ಕಡಿದು ದೇವಸ್ಥಾನಕ್ಕೆ ತರಲಾಗಿತ್ತು. ಆದರೆ ಈ ಕೊಡಿಮರ ವಿಚಾರದಲ್ಲಿ ಅಪಸ್ವರ ಕೇಳಿ ಬಂದಿತ್ತು.
ಈ ವೇಳೆ ರಮಾನಾಥ ರೈ ಅವರು ಪೊಳಲಿ ಕ್ಷೇತ್ರದ ಗೌರವಧ್ಯಕ್ಷರಾಗಿದ್ದರು. ಅರಣ್ಯ ಇಲಾಖೆ ಮರಕ್ಕೆ ಶುಲ್ಕ ವಿಧಿಸಿದ್ದರಿಂದ ಹಿಂದೂ ಸಂಘಟನೆಯ ಕಾರ್ಯಕರ್ತರು ರಮಾನಾಥ ರೈ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು. ಮಾತ್ರವಲ್ಲ, ರೈ ವಿರುದ್ಧ ಅಪಪ್ರಚಾರ ನಡೆಸಿದ್ದರು.
ಇದೀಗ ಈ ವಿಚಾರವಾಗಿ ರಮಾನಾಥ ರೈ ನೊಂದಿದ್ದು, ಪೊಳಲಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ. ಕೊಡಿಮರದ ವಿಷಯದಲ್ಲಿ ನಾನೇನು ತಪ್ಪು ಮಾಡಿಲ್ಲ. ಆದರೂ ನನ್ನ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂದು ರೈ ತಾಯಿಯ ಮುಂದೆ ಕಣ್ಣೀರು ಹಾಕಿದ್ದಾರೆ.