ಉಡುಪಿ, ಜೂ15: ನಾನು ಜಾತಿ, ಧರ್ಮ ನೋಡದೆ ಕರುನಾಡಿನ ಆರೂವರೆ ಕೋಟಿ ಜನರ ಸೇವೆ ಮಾಡಿದ್ದೇನೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತಲೆದೋರಿದ ಸ್ಥಳ ಪರಿಶೀಲನೆಗೆ ಸಚಿವ ಆರ್.ವಿ. ದೇಶಪಾಂಡೆ ಅವರೊಂದಿಗೆ ಆಗಮಿಸಿದ ಸಚಿವರು ಮಾಧ್ಯಮದೊಂದಿಗೆ ಮಾತನಾಡಿದರು. ನಾನು ಶಾಸಕನಾಗಿ, ಮಂತ್ರಿಯಾಗಿ ಈ ಹಿಂದಿನ ಸರಕಾರ ನೀಡಿದ 2 ಖಾತೆಯನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೇ ನಿಭಾಯಿಸಿದ್ದೇನೆ. ಮಾತ್ರವಲ್ಲ, ಮಂತ್ರಿಯಾಗಿ ಒಂದು ಸಮುದಾಯ, ಒಂದು ಜಾತಿ, ಒಂದು ಧರ್ಮ ಎಂದು ನೋಡದೇ ರಾಜ್ಯದ ಆರೂವರೆ ಕೋಟಿ ಜನರ ಸೇವೆ ಮಾಡಿದ್ದೇನೆ ಎಂದು ಹೇಳಿದರು.
ಮಾಜಿ ಸಚಿವ ತನ್ವೀರ್ ಸೇಠ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸೇಠ್ ಹೇಳಿಕೆಯನ್ನು ನಾನು ಕೇಳಿಲ್ಲ. ನಿಮ್ಮಿಂದ ತಿಳಿದಿದ್ದೇನೆ. ಮುಸ್ಲಿಂ ಸಮುದಾಯ ಯಾರೊಬ್ಬರ ಕಿಸೆಯಲ್ಲಿ ಇಲ್ಲ. ನಾಲಾಯಕ್ ಯಾರೆಂಬುದನ್ನು ಜನ ತೀರ್ಮಾನ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಸೇಠ್ ಅವರಿಗೆ ನನ್ನ ಮೇಲೆ ಪ್ರೀತಿ ಹೆಚ್ಚು. ನಾನು ಯಾರಿಗೂ ಮಂತ್ರಿ ಸ್ಥಾನವನ್ನು ತಪ್ಪಿಸಿಲ್ಲ. ಯಾರ ಸಾಮರ್ಥ್ಯ ಎಷ್ಟು ಎಂಬುದನ್ನು ಹೈಕಮಾಂಡ್ ತಿಳಿದಿದೆ. ನನ್ನ ಕೆಲಸ , ಕಾರ್ಯಗಳು ಸರಿ ಇಲ್ಲ ಎನಿಸಿದರೆ ಸಲಹೆ ಪಡೆದು ಮುಂದೆ ಹೋಗುತ್ತೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ನಾವೆಲ್ಲ ಆತ್ಮೀಯತೆ, ಸಹೋದರತೆಯನ್ನು ಇಟ್ಟುಕೊಂಡಿದ್ದೇವೆ ಎಂದು ಹೇಳಿದರು.