ಮಂಗಳೂರು, ಜೂ15: ಪವಿತ್ರ ರಂಜಾನ್ ಮಾಸದಲ್ಲಿ ಕಠಿಣ ಉಪವಾಸ ವೃತ ನಡೆಸಿದ್ದ ಮುಸಲ್ಮಾನ ಬಾಂಧವರು ಇಂದು ಕರಾವಳಿಯಾದ್ಯಂತ ಸೌಹರ್ದತೆಯ ಸಂದೇಶವನ್ನು ಸಾರುವ ಈದುಲ್ ಪಿತ್ರ್ ಹಬ್ಬವನ್ನು ಆಚರಿಸುತ್ತಿದ್ದಾರೆ.
ಕೇರಳದ ಕ್ಯಾಲಿಕಟ್ ಸಮುದ್ರ ತೀರದಲ್ಲಿ ನಿನ್ನೆ ಸಂಜೆ ಚಂದ್ರ ದರ್ಶನ ಆದ ಹಿನ್ನೆಲೆಯಲ್ಲಿ ಇಂದು ಕರಾವಳಿಯಾದ್ಯಂತ ಶಾಂತಿ, ಪ್ರೀತಿ, ಸ್ನೇಹ ಮತ್ತು ಸೌಹರ್ದತೆಯ ಸಂದೇಶವನ್ನು ಸಾರುವ ಈದುಲ್ ಪಿತ್ರ್ ಹಬ್ಬವನ್ನು ಆಚರಿಸಲಾಗುತ್ತಿದೆ. ಕರಾವಳಿಯಲ್ಲಿ ಎಲ್ಲೆಡೆ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಮುಸ್ಲಿಂ ಬಾಂಧವರು ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಮಂಗಳೂರಿನ ವಿವಿಧ ಮಸೀದಿಗಳಲ್ಲಿ ರಂಜಾನ್ ವಿಶೇಷ ಪ್ರಾರ್ಥನೆ ನಡೆಯುತ್ತಿದ್ದು, ಮುಸ್ಲಿಂ ಬಾಂಧವರು ಭಕ್ತಿ-ಭಾವದಿಂದ ಹಬ್ಬ ಆಚರಿಸುತ್ತಿದ್ದಾರೆ. ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ನಡೆದಿದ್ದು, ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ ಖಾದರ್ ಭಾಗಿಯಾಗಿದ್ದಾರೆ. ಮಾತ್ರವಲ್ಲ, ಸಾಮೂಹಿಕ ನಮಾಜ್ ನಲ್ಲಿ ಪಾಲ್ಗೊಂಡ ಖಾದರ್, ಸಾರ್ವಜನಿಕರ ಜೊತೆ ಪರಸ್ಪರ ಈದುಲ್ ಫಿತ್ರ್ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ.