ಕಾರ್ಕಳ, ಜೂ 14 : ಮಳೆಗಾಲದ ಪೂರ್ವ ಮುನ್ನೆಚ್ಚರಿಕೆ ವಹಿಸುವಲ್ಲಿ ಉಡುಪಿ ಜಿಲ್ಲಾಡಳಿತ ಸಂಪೂರ್ಣ ವಿಫಲಗೊಂಡಿರುವ ಪರಿಣಾಮವಾಗಿ ಮುಂಡ್ಲಿ ಡ್ಯಾಂ ಪರಿಸರದಲ್ಲಿ ಕೃತಕ ನೆರೆ ಕಾಣಿಸಿಕೊಂಡು ಹಲವು ಮನೆ ಹಾಗೂ ಫಲವತ್ತಾದ ಕೃಷಿಭೂಮಿ ಜಲವೃತಗೊಂಡಿದೆ.
1994 ರಲ್ಲಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರು ಸಂಗ್ರಹಕ್ಕಾಗಿ ಸ್ವರ್ಣ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದ್ದ ಮುಂಡ್ಲಿ ಡ್ಯಾಂನ್ನು ಸಂಪೂರ್ಣ ಕಾಂಕ್ರೀಟ್ಕರಣ ತಡೆಗೋಡೆ ನಿರ್ಮಿಸಿ ಪರಿಸರದಲ್ಲಿಯೇ ಹೈದರಬಾದ್ ಮೂಲದ ಜಿವಿಪಿ ಇನ್ಫೋ ಜಲ ವಿದ್ಯುತ್ ಘಟಕವನ್ನು ಆರಂಭಿಸಲಾಗಿತ್ತು.
ವಿದ್ಯುತ್ ಘಟಕದ ಆಡಳಿತ ಮಂಡಳಿಯ ಈ ಧೋರಣೆಗೆ ಜಿಲ್ಲಾಡಳಿತದ ಸಹಕಾರದಿಂದಾಗಿ ಕಳೆದ ಕೆಲ ವರ್ಷಗಳಿಂದ ಪರಿಸರದಲ್ಲಿ ಕೃತಕ ನೆರೆ ಕಾಣಿಸಿಕೊಂಡು ಮನೆ,ಕೃಷಿ ಹಾನಿಯಾಗುತ್ತಿತ್ತು. ಈ ಎಲ್ಲಾ ಬೆಳವಣಿಗೆಯನ್ನು ಮಾಧ್ಯಮ ವರದಿ ಪ್ರಕಟಿಸಿದ ಬಳಿಕ ಡ್ಯಾಂ ಗೆ ನಿರ್ಮಿಸಲಾಗಿದ್ದ ಕಾಂಕ್ರೀಟ್ಕರಣ ತಡೆಗೋಡೆಯ ಒಂದಿಷ್ಟು ಭಾಗವನ್ನು ತೆರವುಗೊಳಿಸಿ ಕಬ್ಬಿಣದ ಗೇಟ್ಗಳನ್ನು ಅಳವಡಿಸಲಾಗಿತ್ತು. ಕಳೆದ ವರ್ಷಾವಧಿ ಮಳೆಗಾಳದಲ್ಲಿ ಕಬ್ಬಿಣದ ಗೇಟ್ ತೆರವು ಮಾಡಿರುವುದರಿಂದ ಈ ಪರಿಸರದಲ್ಲಿ ಅಷ್ಟೊಂದು ಮಟ್ಟದಲ್ಲಿ ನೆರೆ ಕಾಣಿಸಿರಲಿಲ್ಲ.
ಪ್ರಸ್ತಕ ವರ್ಷಾವಧಿಯಲ್ಲಿ ಮಳೆಗಾಲಕ್ಕೂ ಮುನ್ನವೇ ಅಕಾಲಿಕ ಮಳೆ ಶುರುವಾಗಿದ್ದು, ಜಿಲ್ಲಾಡಳಿತವು ಇದರ ಬಗ್ಗೆ ಗಮನ ಹರಿಸದೇ ಇದ್ದುದರಿಂದ ಇದುವರೆಗೂ ಡ್ಯಾಂಗೆ ಅಳವಡಿಸಿದ ಕಬ್ಬಣದ ಗೇಟ್ ತೆರವುಗೊಂಡಿಲ್ಲ. ಪಶ್ಚಿಮಘಟ್ಟ ಹಾಗೂ ಕಾರ್ಕಳದಲ್ಲಿ ಬುಧವಾರ ಸುರಿದ ಜಡಿಮಳೆಗೆ ಸ್ವರ್ಣ ನದಿ ತುಂಬಿಹೋಗಿದ್ದು, ಡ್ಯಾಂ ನಿಂದ ಉಕ್ಕಿ ಹರಿಯುತ್ತಿದೆ. ಪರಿಸರದ ಹಲವು ಎಕರೆ ಪ್ರದೇಶದಲ್ಲಿ ಕೃತಕ ನೆರೆ ಕಾಣಿಸಿಕೊಂಡಿದೆ. ಪರಿಣಾಮವಾಗಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ನೀರು ಸರಬರಾಜು ಕೇಂದ್ರ ಸಂಪೂರ್ಣ ಜಲವೃತಗೊಂಡಿದೆ.
ಈ ಎಲ್ಲಾ ಸಮಸ್ಸೆಗೆ ಕಾರಣವಾಗಿರುವ ಜಿವಿಪಿ ಇನ್ಫೋ ಜಲ ವಿದ್ಯುತ್ ಘಟಕ ಸಂಪೂರ್ಣ ಜಲಸಮಗೊಂಡಿದೆ.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಹಮ್ಮದ್ ಇಸಾಕ್ ಹಾಗೂ ಕಂದಾಯ ಕಂದಾಯ ಇಲಾಖೆಯ ಇತರರು ಭೇಟಿ ನೀಡಿದ್ದಾರೆ.