ಬೆಳ್ತಂಗಡಿ, ಜೂ 14: ಬುಧವಾರ ರಾತ್ರಿ ಸುರಿದ ಬಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಜನಜೀವನ ಅಸ್ತವ್ಯಸ್ಥಗೊಂಡಿದೆ. ತಾಲೂಕಿನಲ್ಲಿ ಎರಡು ಮನೆಗಳು ಸಂಪೂರ್ಣ ಕುಸಿದಿದೆ. ಸುಮಾರು ಹತ್ತಕ್ಕೂ ಹೆಚ್ಚು ಮನೆಗಳ ಮೇಲೆ ಮಣ್ಣು ಕುಸಿದು ಬಿದ್ದಿದೆ. ಅಲ್ಲಲ್ಲಿ ಮಣ್ಣು ಕುಸಿದು ಬಿದ್ದಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ. ನೆರೆಭೀತಿಯಿಂದ ಆರಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.
ನಾವೂರು ಗ್ರಾಮದ ಎಂಬಲ್ಲಿ ಎರಡು ಮನೆಗಳು ಸಂಪೂರ್ಣ ಕುಸಿದು ಬಿದ್ದಿದೆ. ಇಂದಬೆಟ್ಟು ಐದುಸೆನ್ಸ್ ನಿವಾಸಿ ಫಾತಿಮಾ ಅವರ ಮನೆಯ ಹಿಂಬಾಗ ಕುಸಿದುಬಿದ್ದಿದೆ. ಮನೆ ಸಂಪೂರ್ಣ ಕುಸಿಯುವ ಭೀತಿಯಲ್ಲಿದೆ. ಇಂದಬೆಟ್ಟು ಗ್ರಾಮದ ಮಹಮ್ಮದ್ ಹನೀಫ್ ಎಂಬವರ ಮನೆಯ ಗೋಡೆ ಕುಸಿದು ಬಿದ್ದಿದ್ದು ಮನೆ ಸಂಪೂರ್ಣ ನೆಲಕಚ್ಚುವ ಭಿತಿಯಲ್ಲಿದೆ. ಮನೆಯವರನ್ನು ಬೇರೆ ಮನೆಗೆ ಸ್ಥಳಾಂತರಿಸಲಾಗಿದೆ.
ಲಾಯಿಲ ಗ್ರಾಮದ ಕಾವಟ್ಟೆ ನಿವಾಸಿ ನಟರಾಜ್ ಎಂಬವರ ಮನೆಯ ಹಿಂಬಾಗದ ಗುಡ್ಡ ಕುಸಿದಿದ್ದು ಮನೆಗೆ ಹಾನಿಯಾಗಿದೆ. ಮನೆಯೊಳಗೆ ಮಣ್ಣು ಮತ್ತು ನೀರು ನುಗ್ಗಿದ್ದು ಅಲ್ಲೋಲಕಲ್ಲೋಲವಾಗಿದೆ. ಗುಡ್ಡ ಮತ್ತೆ ಕುಸಿಯುತ್ತಿದ್ದು ಅಪಾಯಕಾರಿ ಸ್ಥಿತಿಯಿದೆ. ಲಾಯಿಲ ಅಂತಾಜೆ ಬಳಿ ಉಮೇಶ್ ಎಂಬವರ ಮನೆಯ ಮೇಲೆ ಗುಡ್ಡ ಕುಸಿದುಬಿದ್ದು ಹಾನಿಯಾಗಿದೆ. ಮನೆಯ ಹಿಂಬಾಗದಲ್ಲಿ ಮರಗಳು ಮುರಿದು ಬೀಳುವ ಸ್ಥಿತಿಯಲ್ಲಿದ್ದು ಅದನ್ನು ತೆರವುಗೊಳಿಸಲಾಗುತ್ತಿದೆ. ಲಾಯಿಲ ಗ್ರಾಮದಲ್ಲಿ ಪ್ರಕಾಶ, ರಮೇಶ್ ಹಾಗೂ ಲಲಿತ ಅವರ ಮನೆಗಳ ಹಿಂಬಾಗದಲ್ಲಿ ಭೂಕುಸಿತವಾಗಿದ್ದು ಅಪಾಯಕಾರಿ ಸ್ಥಿತಿಯಿದೆ.
ಗುರುವಾಯನಕೆರೆಯಲ್ಲಿ ಕೆರೆ ತುಂಬಿದ್ದು ನೀರು ಹರಿಯುವ ಚಾನೆಲ್ ಬ್ಲಾಕ್ ಆಗಿದ್ದು ಕೆರೆಯ ನೀರು ಪೇಟೆಯ ಚರಂಡಿಯಮೂಲಕ ಹರಿಯುತ್ತಿದ್ದು ಗುರುವಾಯನಕೆರೆ ಬಂಟರ ಭವನ ಸಮೀಪ ರಸ್ತೆ ಬ್ಲಾಕ್ ಆಗಿದೆ. ರಸ್ತೆಯಲ್ಲಿ ನೀರು ತುಂಬಿ ಹರಿಯುತ್ತಿದೆ. ಅದರೊಂದಿಗೆ ತೊರೆಯ ನೀರೂ ರಸ್ತೆಗೆ ನುಗ್ಗುತ್ತಿದ್ದು ಕೆಲ ಮನೆಗಳಿಗೆ ನೀರು ನುಗ್ಗಿದೆ.
ಆರು ಕುಟುಂಬಗಳ ಸ್ಥಳಾಂತರ: ಲಾಯಿಲ ಗ್ರಾಮದ ಗಾಂಧೀನಗರದಲ್ಲಿ ಆರು ಮನೆಗಳಿಗೆ ನದಿ ನೀರು ನುಗ್ಗಿದ್ದು ಆ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ವಸಂತಿ, ಜಗನ್ನಾಧ, ಚಂದ್ರಶೇಖರ, ಶಾರದ, ಜನಾರ್ಧನ ಹಾಗೂ ಶ್ರೀಧರ ಎಂಬವರ ಮನೆಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಇವರ ಮನೆಗಳಿಗೆ ಬೆಳ್ತಂಗಡಿ ನದಿಯ ನೀರು ನುಗ್ಗಿದ್ದು ಮನೆಗಳು ಬಿರುಕುಬಿಟ್ಟಿದೆ. ಈ ಎಲ್ಲ ಕುಟುಂಬಗಳು ದಲಿತಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಕುಟುಂಬಗಳನ್ನು ಸ್ಥಳಾಂತರಿಸುವ ಬಗ್ಗೆ ಕಳೆದ ಮೂರು ವರ್ಷಗಳಿಂದ ಪ್ರಸ್ತಾವನೆಗಳಿದ್ದರೂ ಅದು ಇನ್ನೂ ಕಾರ್ಯರೂಪಕ್ಕೆ ಬರಲಿಲ್ಲ. ಇಲ್ಲಿಗೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಈ ಆರು ಕುಟುಂಬಗಳಿಗೆ ಈಗಾಗಲೆ ಮಂಜೂರಾಗಿರುವ ಸೈಟ್ಗಳಲ್ಲಿ ಮನೆ ನಿರ್ಮಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ಬಗ್ಗೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಾಸಕರ ಭೇಟಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಳೆಹಾನಿಗೊಳಗಾದ ಪ್ರದೇಶಗಳಿಗೆ ಬೇಟಿ ನೀಡಿದ್ದು ಪರಿಶೀಲನೆ ನಡೆಸಿ ಸಂತ್ರಸ್ಥರಿಗೆ ಸ್ವಾಂತನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದ್ದು ತಾಲೂಕಿಗೆ ಪ್ರಕೃತಿ ವಿಕೋಪದ ಹಿನ್ನಲೆಯಲ್ಲಿ ಕೂಡಲೇ ಹತ್ತುಕೋಟಿ ರೂ ಮಂಜೂರುಗೊಳಿಸಬೇಕು ಎಂದು ಒತ್ತಾಯಿಸಿದರು. ಕಂದಾಯ ಇಲಾಖೆಯ ಅಧಿಕಾರಿಗಳೂ ಹಾನಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕೂಡಲೇ ಪರಿಹಾರಕಾರ್ಯಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.