ಬೆಳ್ತಂಗಡಿ, ಜೂ 14 : ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಬುಧವಾರವೂ ಬಾರೀ ಮಳೆ ಸುರಿದಿದ್ದು ಅಲ್ಲಿ ಹಾದು ಹೋಗುವ ರಸ್ತೆಯ ವಿವಿದೆಡೆಗಳಲ್ಲಿ ಗುಡ್ಡ ಕುಸಿತ ಮುಂದುವರಿದಿದ್ದು ಅಪಾಯದ ಸ್ಥಿತಿ ಮುಂದುವರಿದಿದೆ.
ಕುಸಿದು ಬಿದ್ದಿರುವ ಮಣ್ಣನ್ನುಹಾಗೂ ಮರಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಆಗಾಗ ಸುರಿಯುತ್ತಿರುವ ಮಳೆ ಕಾಮಗಾರಿಯ ವೇಗಕ್ಕೆ ತಡೆಹಾಕುತ್ತಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದ್ದಾರೆ. ಮೂರು, ನಾಲ್ಕು, ಆರು, ಏಳು ಹಾಗೂ ಒಂಬತ್ತನೇ ತಿರುವಿನಲ್ಲಿ ಬುಧವಾರ ಮತ್ತೆ ಗುಡ್ಡ ಕುಸಿದು ಬಿದ್ದಿದೆ. ಉಳಿದಂತೆ ಎಂಟನೇ ತಿರುವಿನಲ್ಲಿಯೂ ಕೆಳಭಾಗದ ತಡೆಗೋಡೆ ಕುಸಿಯುವ ಸ್ಥಿತಿಯಲ್ಲಿದ್ದು ಇಲ್ಲಿ ಕುಸಿತವಾದರೆ ಘಾಟಿಯಲ್ಲಿಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯವಿದೆ.
ಘಾಟಿಯಲ್ಲಿ ಮಂಗಳವಾರ ಹಗಲು ರಾತ್ರಿ ಎಂಟು ಜೆಸಿಬಿಗಳು ಕಾರ್ಯನಿರ್ವಹಿಸಿದ್ದವು, ಬುಧವಾರ ಹದಿಮೂರು ಜೆಸಿಬಿ ಯಂತ್ರಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ.ಬಿದ್ದಿರುವ ಮರಗಳನ್ನು ಹಾಗೂ ರಸ್ತೆ ಬದಿಯಲ್ಲಿ ವಾಲಿಕೊಂಡಿರುವ ಬೀಳಲು ಸಿದ್ದವಾಗಿರುವ ಮರಗಳನ್ನು ತೆಗೆಯಲು ಅರಣ್ಯ ಇಲಾಖೆ ಆರಂಭಿಸಿದ್ದು ಇದನ್ನು ಪೂರ್ಣಗೊಳಿಸಲು ಒಂದೆರಡು ದಿನಗಳು ಬೇಕಾಗಲಿದೆ. ಇದೇ ರೀತಿ ಮಳೆ ಮುಂದುವರಿಯುತ್ತಾ ಹೋದಲ್ಲಿ ರಸ್ತೆ ಉಪಯೋಗಕ್ಕೆ ಬಾರದೇ ಇರುವಂತಹ ಸನ್ನಿವೇಶ ನಿರ್ಮಾಣವಾಗುವ ಭೀತಿ ಇದೆ. ಗುರುವಾರ ಸಂಜೆಯೊಳಗೆ ಕಾಮಗಾರಿ ಮುಗಿಸುವ ಗುರಿಯಿದೆ. ಸಂಜೆ ಒಟ್ಟು ಸ್ಥಿತಿಗತಿಗಳನ್ನು ಪರಿಶೀಲಿಸಿದ ಬಳಿಕ ವಾಹನ ಸಂಚಾರ ಆರಂಭಿಸುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದಾಗಿ ಪುತ್ತೂರು ಸಹಾಯಕ ಕಮೀಷನರ್ ಕೃಷ್ಣಮೂರ್ತಿ ಹೇಳಿದ್ದಾರೆ. ಇನ್ನು ಅತಿಯಾದ ವಾಹನ ಸಂಚಾರ, ಗಾಳಿ ಮಳೆಯಿಂದಾಗಿ ಭೂ ಕುಸಿತ ನಡೆದಿದೆ ಎನ್ನಲಾಗುತ್ತಿದೆ.