ಬೆಂಗಳೂರು, ಜೂ 13 : ಪ್ರಧಾನಿ ಮೋದಿ ತಮ್ಮ ಫಿಟ್ನೆಸ್ ಕುರಿತಾದ ವಿಡಿಯೋ ಬಿಡುಗಡೆ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಸವಾಲೆಸೆದ ಬಗ್ಗೆ ಅತ್ಯಂತ ಮಾರ್ಮಿಕವಾಗಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ ನನಗೆ ರಾಜ್ಯದ ಅಭಿವೃದ್ದಿಯ ಫಿಟ್ನೆಸ್ ಮುಖ್ಯ ಎಂದಿದ್ದಾರೆ.
ಬುಧವಾರ ಬೆಳಗ್ಗೆಯಷ್ಟೇ ಪ್ರಧಾನಿ ಮೋದಿ ಅವರು ಟ್ವೀಟರ್ ನಲ್ಲಿ ಸಿಎಂ ಕುಮಾರಸ್ವಾಮಿ, ಟಿಟಿ ಆಟಗಾರ್ತಿ ಮಾನಿಕಾ ಬಾತ್ರಾ, ಐಪಿಎಸ್ ಅಧಿಕಾರಿಗಳಿಗೆ ತಮ್ಮ ಸವಾಲು ಹಾಕಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್ಡಿಕೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ವ್ಯಕ್ತಪಡಿಸಿರುವ ಪ್ರಧಾನಿ ಮೋದಿಯವರನ್ನು ನಾನು ಗೌರವಿಸುತ್ತೇನೆ. ಅಲ್ಲದೆ ನಾನು , ದೈಹಿಕ ಸಾಮರ್ಥ್ಯವೆನ್ನುವುದು ಜೀವನದಲ್ಲಿ ಬಹಳ ಮುಖ್ಯ ಎಂಬುದನ್ನು ನಂಬಿದ್ದೇನೆ. ನನ್ನ ವ್ಯಾಯಾಮದಲ್ಲಿ ಯೋಗ ಬಹುಮುಖ್ಯ ಭಾಗವಾಗಿದೆ. ಆದ್ರೆ ನಾನು ನನ್ನ ಫಿಟ್ನೆಸ್ ಗಿಂತ ನನ್ನ ರಾಜ್ಯದ ಅಭಿವೃದ್ಧಿ ಎಂಬ ಫಿಟ್ನೆಸ್ ಬಗ್ಗೆ ಕಾಳಜಿ ವಹಿಸುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕಾಗಿದೆ ಎಂದು ಹೇಳಿದ್ದಾರೆ.