ಬೆಳ್ತಂಗಡಿ, ಜೂ13: ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡವಾಗಿ ಗುಡ್ಡ ಕುಸಿದ ಪರಿಣಾಮ ಸಂಚಾರಕ್ಕೆ ಧಕ್ಕೆಯಾಗಿದ್ದು, ಈ ವೇಳೆ ಸ್ವತಃ ಪೊಲೀಸ್ ಅಧಿಕಾರಿ ಅಣ್ಣಾಮಲೈ ಮತ್ತು ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರಯಾಣಿಕರ ನೆರವಿಗೆ ನಿಂತು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಈ ಹಿಂದೆ, ಅಕ್ಕ ಪ್ರೀತಿಸಿದವನ ಜೊತೆ ಸೇರಿದ ಪರಿಣಾಮ ಒಬ್ಬಂಟಿಯಾದ ಆಕೆಯ ತಂಗಿಗೆ ಅಣ್ಣನ ಸ್ಥಾನದಲ್ಲಿ ನಿಂತು ಅಭಯ ನೀಡಿದ ಮೂಲಕ ಪೊಲೀಸ್ ಮುಖ್ಯಾಧಿಕಾರಿ ಕೆ.ಅಣ್ಣಾಮಲೈ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದೀಗ ಮತ್ತೆ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರೇ ಚಾರ್ಮಾಡಿ ಘಾಟಿಯಲ್ಲಿ ಪ್ರಯಾಣಿಕರ ನೆರವಿಗೆ ನಿಂತು ಎಲ್ಲರ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಮಾತ್ರವಲ್ಲ, ಬೆಳ್ತಂಗಡಿ ಕ್ಷೇತ್ರದ ಬಿಜೆಪಿ ಶಾಸಕ ಹರೀಶ್ ಪೂಂಜಾ ಕೂಡ ಇದೇ ವೇಳೆ ಪ್ರಯಾಣಿಕರ ನೆರವಿಗೆ ಧಾವಿಸಿದ್ದು, ಜನತೆಗೆ ಮತ್ತಷ್ಟೂ ಹತ್ತಿರವಾಗಿದ್ದಾರೆ.
ಭಾರೀ ಮಳೆಯಂದಾಗಿ ಚಾರ್ಮಾಡಿ ಘಾಟಿಯಲ್ಲಿ ಭೂ ಕುಸಿತ ಉಂಟಾಗಿದ್ದು, ಎರಡೂ ಕಡೆಯಿಂದ ವಾಹನ ಸಂಚಾರ ಬಂದ್ ಆಗಿತ್ತು. ಪರಿಣಾಮ ಪ್ರಯಾಣಿಕರು ಸಂಕಷ್ಟಕ್ಕೆ ತುತ್ತಾಗಿದ್ದರು. ಈ ವೇಳೆ ದ.ಕ ಜಿಲ್ಲೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆದಿದ್ದು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು, ಸ್ವಯಂಸೇವಕರು, ಸಂಘಟನೆಗಳ ಕಾರ್ಯಕರ್ತರು ಹರಸಾಹಸ ಪಟ್ಟು ಪ್ರಯಾಣಿಕರ ನೆರವಿಗೆ ನಿಂತಿದ್ದರು. ಈ ವೇಳೆ ಎಸ್ಪಿ ಅಣ್ಣಾಮಲೈ ಮತ್ತು ಹರೀಶ್ ಪೂಂಜಾ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸ್ಥಳದಲ್ಲಿದ್ದು, ಜನರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.
ಇದೀಗ ಚಾರ್ಮಾಡಿ ಗಾಟಿಯಲ್ಲಿ ಗುಡ್ಡ ಕುಸಿದು ರಸ್ತೆ ಮೇಲೆ ಮಣ್ಣು ಬಿದ್ದು ಸಂಚಾರ ಅಸ್ತವ್ಯಸ್ತಗೊಂಡ ಹಿನ್ನೆಲೆ ನಿರ್ವಹಣಾ ಕಾಮಗಾರಿ ನಡೆಸಲು ಇಂದು ಮತ್ತು ನಾಳೆ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸೋಮವಾರ ಸುಮಾರು 9 ಕಡೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದಿದ್ದು ನಿನ್ನೆ ಸಂಜೆ ವೇಳೆಗೆ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿ ವಾಹನ ಸಂಚಾರಕ್ಕೆ ಅವಕಾಶ ನೀಡಿ ಸಂಚಾರ ನಿರ್ಬಂಧಿಸಲಾಯ್ತು. ಚಾರ್ಮಾಡಿ , ಶಿರಾಡಿ ಘಾಟಿ ಎರಡೂ ಮುಚ್ಚಿರುವುದರಿಂದ ವಾಹನಗಳಿಗೆ ಮಡಿಕೇರಿ, ಕುದುರೆಮುಖ ಮೂಲಕ ತೆರಳಲು ಅವಕಾಶ ಕಲ್ಪಿಸಿಕೊಡಲಾಗಿದೆ.