ಉಜಿರೆ, ಜೂ 12: ಕರಾವಳಿ ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ನ ಹಲವೆಡೆ ಗುಡ್ಡಗಳು ಕುಸಿದ ಪರಿಣಾಮ ಮುಂದಿನ 2 ದಿನಗಳ ಕಾಲ ಚಾರ್ಮಾಡಿ ಘಾಟ್ ನಲ್ಲಿ ಮುಂಜಾಗ್ರತ ಕ್ರಮವಾಗಿ ಸಂಚಾರವನ್ನು ಸಂಪೂರ್ಣ ನಿಷೇಧಿಸಿ ಚಿಕ್ಕಮಗಳೂರಿನ ಪೊಲೀಸ್ ವರಿಷ್ಟಾಧಿಕಾರಿ ಅಣ್ಣಮಲೈ ಆದೇಶ ಹೊರಡಿಸಿದ್ದಾರೆ.
ಸೋಮವಾರ ತಡ ರಾತ್ರಿ ಗುಡ್ಡ ಕುಸಿದ ಪರಿಣಾಮ ರಸ್ತೆಗಳು ಮುಚ್ಚಿಹೋಗಿದ್ದು, ಎರಡೂ ಕಡೆಯಿಂದ ವಾಹನಗಳು ಸಾಲುಗಟ್ಟಿ ನಿಂತಿದ್ದವು . ಇದರಿಂದಾಗಿ ಪ್ರಯಾಣಿಕರಿಗೆ ಬಹಳ ತೊಂದರೆಯಾಗಿದ್ದು, ರಾತ್ರಿಯಿಂದ ರಸ್ತೆ ಮಧ್ಯೆ ಸಿಲುಕಿರುವ ಪ್ರಯಾಣಿಕರಿಗೆ ಕೆಲ ಸಮಾಜ ಸೇವಕರು ಆಹಾರ ಮತ್ತು ನೀರು ಒದಗಿಸಿದ್ದರು.
ಮಂಗಳವಾರ , ಚಿಕ್ಕಮಗಳೂರು ಎಸ್ಪಿ ಅಣ್ಣಮಲೈ ಘಟನಾ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು ಮುಂದಿನ 48 ಗಂಟೆಗಳ ಕಾಲ ಸಂಚಾರ ನಿಷೇದಿಸಿ ಆದೇಶ ಹೊರಡಿಸಿದ್ದಾರೆ. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕೆಲವು ಪ್ರದೇಶದಲ್ಲಿ 22 ಅಡಿಗಳಿಗಿಂತಲೂ ಹೆಚ್ಚು ಭೂ ಕುಸಿತ ಆಗಿದ್ದು, ತೀವ್ರ ಮಳೆಯ ಪರಿಣಾಮ ರಸ್ತೆಯಲ್ಲಿ ಹೂಳು ತುಂಬಿಕೊಂಡಿದೆ. ಇವೆಲ್ಲವನ್ನೂ ತೆರವು ಗೊಳಿಸಲಾಗಿದ್ದು ಸದ್ಯದ ಮಟ್ಟಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಗುಡ್ಡೆ ಕುಸಿತದ ಪರಿಣಾಮ ಎರಡು ಭಾಗದಲ್ಲೂ ೫೦೦ಕ್ಕೂ ಅಧಿಕ ವಾಹನಗಳು ಸ್ಥಗಿತಗೊಂಡಿದ್ದು ಇದೀಗ ಸಂಚಾರ ಪುನಾರಾರಂಭಿಸಿದೆ. ಅರಣ್ಯ ಇಲಾಖೆ ಹಾಗೂ ಹೈವೇ ಪ್ರಾಧಿಕಾರ ರಸ್ತೆಯಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಕಾಲವಕಾಶ ಕೋರಿದ್ದು, ಕಾಮಗಾರಿ ಹಾಗೂ ಮುಂಜಾಗ್ರತಾ ಹಿನ್ನಲೆಯಲ್ಲಿ ಸಂಚಾರ ನಿಷೇಧಿಸಲಾಗಿದೆ ಎಂದು ಸಷ್ಟಪಡಿಸಿದ್ದಾರೆ.
ಚಾರ್ಮಾಡಿ ಹಾಗೂ ಶಿರಾಡಿ ಘಾಟ್ ಸಂಚಾರಕ್ಕೆ ಬಂದ್ ಆದಾ ಪರಿಣಾಮ ಬದಲಿ ಮಾರ್ಗವಾದ ಸಂಪಾಜಿ ಘಾಟ್ ಮೂಲಕ ಇದೀಗ ವಾಹನ ಸವಾರರು ಸಂಚಾರ ನಡೆಸುವುದು ಅನಿವಾರ್ಯವಾಗಿದೆ.