ಮಂಗಳೂರು, ಜೂ. 11: ದನದ ವ್ಯಾಪಾರಿ ಜೋಕಟ್ಟೆಯ ಹುಸೇನಬ್ಬ ಅಸಹಜ ಸಾವು ಪ್ರಕರಣಕ್ಕೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್ ತನಿಖೆಯು ಜೂ 11 ರ ಸೋಮವಾರ ನಡೆಯಿತು. ಜೋಕಟ್ಟೆಯ ಈದ್ಗಾ ಭೂಮಿಯಲ್ಲಿ ದಫನ ಮಾಡಲಾಗಿದ್ದ ಹುಸೇನಬ್ಬರ ಮೃತದೇಹವನ್ನು ಉಡುಪಿಯ ನ್ಯಾಯಾಧೀಶ ಇರ್ಫಾನ್ ಅವರ ಸಮ್ಮುಖದಲ್ಲಿ ಹೊರತೆಗೆದು ಮಹಜರು ನಡೆಸಲಾಯಿತು. ಈ ಸಂದರ್ಭ ಹುಸೇನಬ್ಬರ ಸಂಬಂಧಿಕರು, ತನಿಖಾಧಿಕಾರಿ ಹೃಷಿಕೇಶ್ ಸೋನಾವಣೆ ಹಾಜರಿದ್ದರು.
ಜೂ ೧೧ ರ ಸೋಮವಾರ ಬೆಳಗ್ಗೆ ಆಗಮಿಸಿದ ನ್ಯಾಯಾಧೀಶರು ಮಧ್ಯಾಹ್ನದ 12 ಗಂಟೆಯವರೆಗೆ ಮಹಜರು ಪ್ರಕ್ರಿಯೆ ನಡೆಸಿದ ಬಳಿಕ ಧಾರ್ಮಿಕ ವಿಧಿವಿಧಾನದೊಂದಿಗೆ ಮತ್ತೆ ಮೃತದೇಹದ ದಫನ ಕಾರ್ಯ ನಡೆಯಿತು.
ಹುಸೇನಬ್ಬ ಅವರ ಸಾವು ಪೊಲೀಸ್ ಕಸ್ಟಡಿಯಲ್ಲಿ ಆಗಿದೆ ಎಂಬ ಕುಟುಂಬಸ್ಥರು ಆರೋಪಿಸಿದ ನೀಡಿದ ದೂರಿನ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದ್ದು, ಇದೇ ಹಿನ್ನಲೆಯಲ್ಲಿ ಮಹಜರು ಮಾಡಲಾಯಿತು. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯಡ್ಕ ಠಾಣೆಯ ಎಸ್ಐ, ಇಬ್ಬರು ಪೊಲೀಸರು ಸಹಿತ 10 ಮಂದಿಯನ್ನು ಈ ಹಿಂದೆಯೇ ವಶಕ್ಕೆ ಪಡೆಯಲಾಗಿದೆ.
ಸಂಬಂಧಿಸಿದ ಅಧಿಕಾರಿಗಳು ದಫನ ಭೂಮಿಯಲ್ಲಿ ಸಂಜೆಯವೆರಗೂ ಹಜರಿದ್ದರು. ಈ ವೇಳೆ ಅಲ್ಲಿನ ಸ್ಥಳೀಯ ಮೂವರನ್ನು ಸಾಕ್ಷಿಗಳನ್ನಾಗಿ ಪರಿಗಣಿಸಲಾಯಿತು. . ಈ ಸಂದರ್ಭದಲ್ಲಿ ಉಡುಪಿಯ ಪೊಲೀಸ್ ಅಧಿಕಾರಿಗಳೊಂದಿಗೆ ಪಣಂಬೂರು ಪೊಲೀಸರು ಕೂಡಾ ಉಪಸ್ಥಿತರಿದ್ದರು.