Karavali
ಉತ್ತಮ ಸಮಾಜ ನಿರ್ಮಾಣಕ್ಕೆ ವಕೀಲರ ಪಾತ್ರ
- Thu, Dec 03 2020 05:16:04 PM
-
ಸುಕೇಶ್ ಶೆಟ್ಟಿ
ಉಡುಪಿ, ಡಿ.03 (DaijiworldNews/MB) : ವಕೀಲ ವೃತ್ತಿಯು ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜದಲ್ಲಿ ಕಾನೂನು ವ್ಯವಸ್ಥೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಮಾಜವು ಸುಗಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಾತ್ರಿಪಡೆಸುವಲ್ಲಿ ವಕೀಲರು ರಚಿಸುವ ಪ್ರಮುಖ ಪಾತ್ರ ತುಂಬ ಅಗತ್ಯವಾಗಿದೆ. ''ಇಂಟರ್ನ್ಯಾಶನಲ್ ಬಿ ಕೈಂಡ್ ಟು ಲಾಯರ್ಸ್ ಡೇ'' ಎಂದೂ ಕೂಡ ಕರೆಯಲ್ಪಡುವ ವಕೀಲರ ದಿನಾಚರಣೆ, ಕಾನೂನು ಅಭ್ಯಾಸ ಮಾಡುವ ಎಲ್ಲರ ಬಗ್ಗೆ ದಯೆ ತೋರಲು ಜನರನ್ನು ಪ್ರೋತ್ಸಾಹಿಸುತ್ತದೆ ಮತ್ತು ದೇಶದಲ್ಲಿ ಕಾನೂನು ವ್ಯವಸ್ಥೆ ಉತ್ತಮವಾಗಿ ನಡೆಯುವಂತೆ ನೋಡಿಕೊಳ್ಳುತ್ತದೆ.
ಸುಕೇಶ್ ಶೆಟ್ಟಿ
ವಕೀಲರು ಅತೀ ಹೆಚ್ಚು ಶ್ರಮ ವಹಿಸುವ ಜನರಾಗಿರುತ್ತಾರೆ. ಇತರ ವೃತ್ತಿಗೆ ಹೋಲಿಸಿದರೆ ವಕೀಲರು ಇನ್ನೂ ಹಲವು ಗಂಟೆಗಳ ಕಾಲ ಜಾಸ್ತಿ ಕೆಲಸವನ್ನು ಮಾಡುತ್ತಿರುತ್ತಾರೆ. ವಕೀಲರು ಪ್ರತಿದಿನ ಕೆಲಸ ಮಾಡಲು ಹೆಚ್ಚಿನ ಸಮಯವನ್ನು ಮೀಸಲಿಡಬೇಕಾಗಿದ್ದರೂ ಸಹ, ವಕೀಲರು ತಮ್ಮ ಕಕ್ಷಿದಾರರಿಗೆ ತಮ್ಮ ಕಾನೂನು ಕಾಳಜಿಗಳೊಂದಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುತ್ತಾರೆ. ವಕೀಲರ ಜ್ಞಾನವು ಇತರ ಜನರ ಜೀವನದ ಮೇಲೆ ಪರಿಣಾಮ ಬೀರುವ ಜ್ಞಾನವಾಗಿದ್ದು ವಕೀಲರಿಗೆ ಹೆಚ್ಚು ಕಷ್ಟಪಟ್ಟು ಕೆಲಸ ಮಾಡಲು ಪ್ರೆರೇಪಿಸುತ್ತದೆ. ವಕೀಲರಿಗೆ ತಮ್ಮ ಜೀವನಶೈಲಿಯೊಂದಿಗೆ ಎಲ್ಲಾ ಸಮಯದಲ್ಲಿಯೂ ಕಾರ್ಯಗಳ ಪಟ್ಟಿಯೊಂದಿಗೆ ಸಮಯವನ್ನು ಕಳೆಯುವ ಬದ್ದತೆ ಉಂಟಾಗಿದೆ. ಹಿಂದಿನ ಕಾಲದಲ್ಲಿ ಲ್ಯಾಂಡ್ಲೈನ್ ಪೋನ್, ಪೋಸ್ಟ್ಕಾರ್ಡ್ಗಳೊಂದಿಗೆ ಮಾತ್ರ ಕಾನೂನಿನ ತುರ್ತು ಸಮಾಲೋಚನೆಗೆ ಕಚೇರಿ ಸಮಯ ಹೊಂದಿಕೊಂಡಿದ್ದರೆ, ಇದೀಗ ತಂತ್ರಜ್ಞಾನದ ಯುಗದಲ್ಲಿ ಕಕ್ಷಿದಾರರು ಅತೀ ಹೆಚ್ಚು ವಕೀಲರ ಸಮಯವನ್ನು ಅವಲಂಬಿತರಾಗಿರುತ್ತಾರೆ.
ವಕೀಲರು ದೈನಂದಿನ ದಿನಚರಿಯಲ್ಲಿ ತಮ್ಮ ಪ್ರಕರಣಗಳನ್ನು ಪರಿಶೀಲಿಸಲು, ವ್ಯವಹಾರಗಳಿಗೆ ಪ್ರತಿಕ್ರಿಯಿಸಲು, ಬಹುಪಾಲು ಕಚೇರಿಯಿಂದ ಹೊರಗುಳಿದ ನಂತರ ಕಾರ್ಯಗಳನ್ನು ಮುಗಿಸುವ ಅನಿವಾರ್ಯತೆಯಿದ್ದಲೂ, ಅಗತ್ಯವಾದ ದಾಖಲೆಗಳನ್ನೂ ಮಾಡುವುದು, ಗಡುವಿನ ಸಮಯದ ಒಳಗೆ ಸಲ್ಲಿಸುವ ಕಾರ್ಯದಿಂದಲೂ ಅಥವಾ ಇನ್ನಿತರ ವ್ಯಯಕ್ತಿಕ ಕಾರಣಗಳಿಂದಲೂ ಅಭ್ಯಾಸದಲ್ಲಿ ತಲ್ಲೀನರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಕಕ್ಷಿದಾರರು, ಕೆಲವೊಂದು ತುರ್ತು ಸಮಸ್ಯೆ ಹೊರತುಪಡಿಸಿ, ಇಂತಹ ಪರಿಸ್ಥಿತಿಯನ್ನು ಕೂಡ ಅರ್ಥ ಮಾಡಿಕೊಂಡು ಸಂಪರ್ಕಿಸಿದಾಗ ಕಕ್ಷಿದಾರರಿಗೆ ಕೂಡ ಸಮಯವನ್ನು ನೀಡಲು ಕೆಲಸವನ್ನು ಕ್ರಮವಾಗಿ ಮಾಡಲು ವಕೀಲರಿಗೆ ಸಹಾಯವಾಗುತ್ತದೆ.
ಸಮಾಜದಲ್ಲಿ ಜನರನ್ನು ಉತ್ತಮ ನಾಗರೀಕರನ್ನಾಗಿ ಪರಿವರ್ತಿಸುವಲ್ಲಿ ವಕೀಲರ ಪಾತ್ರ ಅತೀ ಮುಖ್ಯವಾಗಿದ್ದು, ತಮ್ಮನು ರಕ್ಷಿಸಿಕೊಳ್ಳಲು ಸಾಧ್ಯವಾಗದವರನ್ನೂ ಪ್ರತಿನಿಧಿಸಲು ಮತ್ತು ಆಧುನಿಕ ಸಮಾಜದ ಪ್ರತಿಯೊಂದು ಅಂಶಗಳಲ್ಲೂ ಕೆಲಸ ಮಾಡಲು ಪ್ರತಿದಿನ ವಕೀಲರನ್ನು ನೇಮಿಸಿಕೊಳ್ಳಲಾಗುತ್ತಿದ್ದು ಅವರಿಗೆ ಕಾನೂನಿನ ಸಲಹೆ ಅತೀ ಅಗತ್ಯ. ದೈನಂದಿನ ದಿನಚರಿಯಲ್ಲಿ ಸಾಮಾನ್ಯವಾಗಿ ಒಂದು ಮೋಟಾರು ವಾಹನ ಅಪಘಾತವಾದಾಗಲೂ ಕೂಡ ಜನರಲ್ಲಿ ಕಾನೂನು ಅರಿವಿಲ್ಲದೇ ಸಳ್ಥದಲ್ಲಿಯೇ ಎದುರುದಾರಾರನ್ನು ಬೆದರಿಸಿ ಹಣಸುಲಿಗೆ ಮಾಡುವಂತದ್ದು, ಇನ್ನಿತರ ಕಾನೂನು ಅರಿವಿಲ್ಲದ ಪ್ರಕ್ರಿಯೆಗಳು ನಡೆಯುತ್ತಿರುತ್ತದೆ. ಇಂತಹ ಹಲವಾರು ತಪ್ಪುಗಳನ್ನು ಜನಸಾಮಾನ್ಯರು ದಿನ ನಿತ್ಯ ಮಾಡುತ್ತಿರುತ್ತಾರೆ. ಜನರಿಗೆ ಉತ್ತಮ ಕಾನೂನಿನ ಮಾಹಿತಿ ವಕೀಲರಿಂದ ಅತೀ ಅಗತ್ಯವಾಗಿದ್ದು, ಜನರ ತಪ್ಪುಗಳನ್ನು ತಿದ್ದುಪಡಿಸಿ ಮಾರ್ಗದರ್ಶನ ನೀಡಿ ಉತ್ತಮ ನಾಗರೀಕರನ್ನಾಗಿ ಮಾಡಿಸಿ ಕಾನೂನು ವ್ಯವಸ್ಥೆ ಕಾಪಾಡುವಲ್ಲಿ ವಕೀಲರು ಸಮಾಜದಲ್ಲಿ ಬಹುಮುಖ್ಯ ಪಾತ್ರವಹಿಸುತ್ತಾರೆ.
ಭಾರತದ ಪ್ರಜಾಪ್ರಬುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ ಕ್ಷೇತ್ರವು ಮಹತ್ವ ಹಾಗೂ ಪರಿಣಾಮಕಾರಿಯಾಗಿರುವ ಕಾರಣ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಜಗತ್ತಿನಲ್ಲಿ ಇಂದಿಗೂ ಹೆಚ್ಚು ಶಕ್ತಿಶಾಲಿ ಆಗಿದೆ. ಸಾರ್ವಜನಿಕರ ಮೂಲಭೂತ ಹಕ್ಕುಗಳನ್ನು ರಕ್ಷಣೆ ಮಾಡುವಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗ ಏಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬಹುದೋ, ಅಷ್ಟೇ ಪರಿಣಾಮಕಾರಿಯಾಗಿ ವಕೀಲರೂ ಕೂಡ ಕೆಲಸ ಮಾಡುತ್ತಿದ್ದು ಮತ್ತು ಮಾಡಬಹುದಾಗಿದೆ. ನ್ಯಾಯಾಂಗ ಎಂದ ಕೂಡಲೇ ನ್ಯಾಯಾಧೀಶರು ಮಾತ್ರ ಅಲ್ಲ, ನ್ಯಾಯವಾಧಿಗಳು ಕೂಡಾ ನ್ಯಾಯಾಂಗದ ಒಂದು ಅವಿಭಾಜ್ಯ ಅಂಗ. ನ್ಯಾಯವಾದಿಗಳನ್ನು ನ್ಯಾಯಾಲಯದ ಅಧಿಕಾರಿಗಳೆಂದು ಪರಿಗಣಿಸಲಾಗಿದ್ದು ಅವರು ಕೂಡಾ ನ್ಯಾಯಾಲಯದ ವ್ಯವಹಾರದ ಒಂದು ಭಾಗವಾಗಿ ಇರುತ್ತಾರೆ.
ಇಂದಿನ ಆಧುನಿಕ ಯುಗದಲ್ಲಿ ವಕೀಲರು ತಂತ್ರಜ್ಞಾನಕ್ಕೆ ಕಡ್ಡಾಯವಾಗಿ ಅವಲಂಬಿತರಾಗಿರುವುದು ಅವಶ್ಯಕವಾಗಿರುತ್ತದೆ. ಪ್ರಕರಣಗಳನ್ನು ಬೇಗನೇ ವಿಲೇವಾರಿ ಮಾಡುದಕ್ಕೆ ನ್ಯಾಯಾಂಗ ಇದೀಗ ಡಿಜಿಟಲೀಕರಣಕ್ಕೆ ಬಂದು ನಿಂತಿದೆ. ಯಾವ ರೀತಿ ಜನರ ಸ್ವಾಸ್ಥವನ್ನು / ಆರೋಗ್ಯವನ್ನು ಕಾಪಾಡುವರೇ ಡಾಕ್ಟರ್ಗಳು ಸಮಾಜಕ್ಕೆ ಅನಿವಾರ್ಯವೋ ಅದೇ ರೀತಿ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಬೇಕಾದರೆ ವಕೀಲರು ಸಮಾಜಕ್ಕೆ ಅಷ್ಟೇ ಅನಿವಾರ್ಯ. ಜನರು ಇತ್ತೀಚಿನ ದಿನಗಳಲ್ಲಿ ಕೋರ್ಟ್ ಕಲಾಪಗಳ ವಿವಿಧ ರೀತಿಯ ಸ್ವರೂಪದ ಕೌಟುಂಬಿಕ ಸಮಸ್ಯೆ, ಭೂ ವಿವಾಧ, ಕ್ರಿಮಿನಲ್ ಪ್ರಕರಣ ಇತ್ಯಾದಿ ಪ್ರಕರಣಗಳಲ್ಲಿ ಸಿಕ್ಕಿ ಒತ್ತಡವನ್ನು ತಡೆದುಕೊಳ್ಳದೇ ಉದ್ವೇಗಕ್ಕೆ ಒಳಗಾಗಿ ಹಲವಾರು ಸಮಸ್ಯೆಗಳಿಂದ ಬಳಲುವುದನ್ನು ಕಾಣುತ್ತೇವೆ. ಇಂತಹ ಸಂದರ್ಭದಲ್ಲಿ ವಕೀಲರು ತನ್ನೆಲ್ಲಾ ವಿದ್ವತ್ತನ್ನು ಉಪಯೋಗಿಸಿ ಮಾಡಿಕೊಟ್ಟಲ್ಲಿ ಬಹುಷಃ ಆತನಿಗೆ ಹದಗೆಡಬಹುದಾದ ಆರೋಗ್ಯವನ್ನು ತಹಬದಿಗೆ ತರಬಹುದು. ಈ ಕಾರಣಕ್ಕೆ ಸಾಮಾಜಿಕ ಸ್ವಾಸ್ತ್ಯವನ್ನು ಕಾಪಾಡುವ ಮಹತ್ವದ ಜವಬ್ದಾರಿ ವಕೀಲರದ್ದು ಆಗಿರುತ್ತದೆ.
ಒಬ್ಬ ನ್ಯಾಯವಾದಿಯಾಗಿ ತಾನು ಕೋರ್ಟಿನ ಅಧಿಕಾರಿ ಎನ್ನುವುದರೊಂದಿಗೆ ತನಗೂ ಹಕ್ಕುಗಳಿವೆ, ಕರ್ತವ್ಯಗಳಿವೆ ಎಂಬುದನ್ನು ವಕೀಲರು ಅರಿತು, ತನ್ನ ಉದ್ಯೋಗದಲ್ಲಿ ವಕೀಲರು ಕೆಲವೊಂದು ತತ್ವಗಳನ್ನು ಅನುಸರಿಸಲೇಬೇಕಾಗುತ್ತದೆ. ವಕೀಲರು ತಮ್ಮ ಘನತೆಯನ್ನು ಬಳಸಿಕೊಂಡು ನ್ಯಾಯಾಲಯದ ಘನತೆಯನ್ನು ಕಾಪಾಡಬೇಕು. ವಕೀಲರು ಯಾವತ್ತೂ ಕೂಡ ತಮ್ಮ ಆತ್ಮ ಸಾಕ್ಷಿಗೆ ವಿರುದ್ದವಾಗಿ ಕೆಲಸ ಮಾಡಬಾರದು. ಕೋರ್ಟಿನ ಕಲಾಪಗಳ ಮೇಲೆ ವಿಶ್ವಾಸ ಉಳ್ಳವರು ಆಗಿರಬೇಕು ಮತ್ತು ಗೌರವವನ್ನು ನೀಡಬೇಕು. ನ್ಯಾಯ ವಿಲೇವಾರಿಯಲ್ಲಿ ನ್ಯಾಯಾಂಗದ ಘನತೆಯನ್ನು ಕಾಪಾಡಬೇಕು. ಕಕ್ಷಿದಾರರು ಕೊಟ್ಟ ಮಾಹಿತಿಯನ್ನು ಯಾವತ್ತೂ ಬಹಿರಂಗಪಡಿಸಬಾರದು. ವಕೀಲರ ಕಛೇರಿ ಎಂಬುದು ಸಾರ್ವಜನಿಕರ ಕಛೇರಿ ಇದ್ದ ಹಾಗೆ ಎಂದರೆ ಯಾರು ಕೂಡಾ ಆತನನ್ನು ಬೇಟಿ ಆಗಬಹುದು ಮತ್ತು ಕಾನೂನಿನ ಸಲಹೆ ಪಡೆಯಬಹುದು.
ಸ್ವಾತಂತ್ರ್ಯ ಹೋರಾಟಗಾರರಾದ ಭಾರತದ ಮೊದಲ ರಾಷ್ಟ್ರಪತಿಗಳಾದ ಡಾ| ಬಾಬು ರಾಜೇಂದ್ರ ಪ್ರಸಾದ್ ಅವರು ಸ್ವತಹ ವಕೀಲರು ಆಗಿದ್ದು ಅವರ ಜನುಮದಿನದ ಪ್ರಯುಕ್ತ ಪ್ರತೀ ವರ್ಷ ಡಿಸೆಂಬರ್ 3ರಂದು ವಕೀಲರ ದಿನಾಚರಣೆ ಆಚರಿಸುವ ಮೂಲಕ ವಕೀಲರ ಅಸಾಮಾನ್ಯ ಸೇವೆಗೆ ಸಲ್ಲಿಸುವ ಗೌರವವಾಗಿದೆ. ವಕೀಲರ ಸಕಾರಾತ್ಮಕ, ಗೌರವಾನ್ವಿತ ಚಿತ್ರಣವನ್ನು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಉತ್ತೇಜಿಸಲು ವಕೀಲರ ದಿನಾಚರಣೆಯು ಮಹತ್ವವನ್ನು ಹೊಂದಿದೆ. ಸ್ವತಂತ್ರ ಭಾರತ ಎನಿಸಿಕೊಳ್ಳುವುದರಲ್ಲಿ ವಕೀಲರ ಕೊಡುಗೆ ಅಪಾರವಾಗಿದ್ದು ವಕೀಲರು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಸಮಾಜಕ್ಕೆ ಅನಿರ್ವಾಯವಾಗಿದ್ದಾರೆ. ವಕೀಲ ವೃತ್ತಿ ಎನ್ನುವುದು ಕಕ್ಷಿಗಾರನ ಪರವಾಗಿ ಹೋರಾಡಿದಾಗ ಮನಸ್ಸಿಗೆ ತೃಪ್ತಿ ಕೊಡುವ ವೃತ್ತಿ ಆಗಿದೆ. ತನ್ನನ್ನು ನೇಮಕಗೊಳಿಸಿದ ಕಕ್ಷಿಗಾರನಿಗೆ ನ್ಯಾಯ ಒದಗಿಸುವುದು ವಕೀಲರ ವೃತ್ತಿ ಧರ್ಮ. ಕಕ್ಷಿಗಾಗರನ ಹಕ್ಕುಗಳನ್ನು ರಕ್ಷಿಸಿ ಕಾನೂನಿನ ನಿಯಮ ಪಾಲಿಸುವುದು ನ್ಯಾಯವಾದಿಯ ಕರ್ತವ್ಯವಾಗಿರುತ್ತದೆ.