ಬೆಂಗಳೂರು, ಜೂ 10 : ಸಂಪುಟ ವಿಸ್ತರಣೆಯ ಬಳಿಕ ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡಿರುವ ಶಾಸಕ ಎಂಬಿ ಪಾಟೀಲ್ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ ಬಳಿಕ ಸಮಾಧಾನಗೊಂಡಂತೆ ಕಾಣುತ್ತಿದೆ. ತನಗೇನು ಬೇಡ ಶಾಸಕ ಸ್ಥಾನದಲ್ಲೇ ತೃಪ್ತಿ ಇದೆ ಎಂದು ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಹೈಕಮಾಂಡ್ ಬೇಟಿ ಬಳಿಕ ಪಕ್ಷದಲ್ಲಿ ನನಗೆ ವೈಯಕ್ತಿಕವಾಗಿ ಅನ್ಯಾಯವಾಗಿರುವುದು ನಿಜ.ಹೀಗಾಗಿ ನೊಂದಿರುವ ನಾನು ಎಐಸಿಸಿ ಅಧ್ಯಕ್ಷರೊಂದಿಗೆ ಈ ಕುರಿತು ಮಾತುಕತೆ ನಡೆಸಿದ್ದೇನೆ ಎಂದರು.
ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ ಅಹ್ಮದ್ ಪಟೇಲ್ ನನ್ನನ್ನು ದೆಹಲಿಗೆ ಕರೆಯಿಸಿಕೊಂಡಿದ್ದು, ಅವರ ಆಹ್ವಾನದ ಮೇರೆಗೆ ದೆಹಲಿಗೆ ಹೋಗಿದ್ದೆ. ಅಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚೆ ನಡೆಸಿದ್ದೇನೆ. ಪಕ್ಷಕ್ಕೆ ನಾನು ಮಾಡಿರುವ ಸೇವೆ, ನೀರಾವರಿ ಕೆಲಸಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ನನ್ನೆಲ್ಲಾ ಭಾವನೆಗಳನ್ನು ರಾಹುಲ್ ಗಾಂಧಿ ಜೊತೆ ಹಂಚಿಕೊಂಡಿದ್ದು, ರಾಜ್ಯದಲ್ಲಿ ನಡಿತಾ ಇರುವ ವಿದ್ಯಮಾನಗಳನ್ನು ರಾಹುಲ್ ಗಾಂಧಿ ಗಮನಕ್ಕೆ ತಂದಿದ್ದೇನೆ. ಆದರೆ ಅವರ ಬಳಿ ಯಾವ ಹುದ್ದೆಗೂ ನಾನು ಡಿಮ್ಯಾಂಡ್ ಮಾಡಿಲ್ಲ ಎಂದಿರುವ ಅವರು ಶಾಸಕ ಸ್ಥಾನದಲ್ಲೇ ನನಗೆ ತೃಪ್ತಿ ಇದೆ ಎಂದರು.
ಇದೇ ವೇಳೆ ಮಾಧ್ಯಮ ವರದಿಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಡಿಸಿಎಂ ಸ್ಥಾನ ಕೇಳಿದ್ದೇನೆ ಎಂದು ತಪ್ಪುಸುದ್ದಿ ಬಂದಿವೆ. ಬಿಜೆಪಿಯಿಂದ ನನಗೆ ಯಾರೂ ಸಂಪರ್ಕ ಮಾಡಿಲ್ಲ. ನಾನು ಕಾಂಗ್ರೆಸ್ ನಲ್ಲೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು