ಕಾಸರಗೋಡು,ಜೂ 10: ನೀರಿನ ಹೊಂಡಕ್ಕೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವು ನೀರಿನ ಹೊಂಡಕ್ಕೆ ಬಿದ್ದು ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ಕಾಞ೦ ಗಾಡ್ ಕುಶಾಲನಗರದಲ್ಲಿ ನಡೆದಿದೆ. ಇದರಿಂದ ಕಾಸರಗೋಡು ಜಿಲ್ಲೆಯಲ್ಲಿ ಮಳೆಗೆ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ಕುಶಾಲನಗರದ ಮುಹಮ್ಮದ್ ಅನ್ಸಿಫ್ ರವರ ಪುತ್ರಿ ಫಾತಿಮಾ ಸೈನಬಾ ಮೃತಪಟ್ಟ ಬಾಲಕಿ.
ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಧಿಡೀರನೇ ನಾಪತ್ತೆಯಾಗಿದ್ದು, ಶೋಧ ನಡೆಸಿದಾಗ ಮನೆ ಸಮೀಪದ ನೀರು ತುಂಬಿದ್ದ ಹೊಂಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮೃತದೇಹವನ್ನು ಹೊಸದುರ್ಗ ಪೊಲೀಸರು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಗಿದೆ .
ಆದೂರು ದೇಲಂಪಾಡಿಯಲ್ಲಿ ಹೊಳೆ ದಾಟುತ್ತಿದ್ದಾಗ ಚನಿಯಪ್ಪ ನಾಯ್ಕ್ ಎಂಬವರು ನೀರುಪಾಲಾಗಿ ಮೃತಪಟ್ಟಿದ್ದರು. ಗುರುವಾರ ನೀರುಪಾಲಾಗಿದ್ದ ಚನಿಯಪ್ಪ ನಾಯ್ಕ್ ರ ಮೃತದೇಹ ಶನಿವಾರ ಮಧ್ಯಾಹ್ನ ಲಭಿಸಿತ್ತು