ಉಳ್ಳಾಲ, ಜೂ 10 : ಉಳ್ಳಾಲ ಭಾಗದಲ್ಲಿ ಶನಿವಾರ ಸುರಿದ ಧಾರಾಕಾರ ಮಳೆ ಮತ್ತು ಗಾಳಿಗೆ ಹಲವೆಡೆ ಮರ ಬಿದ್ದು ಸುಮಾರು 70 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಉರುಳಿಬಿದ್ದರೆ, ಮನೆ ಮತ್ತು ಅಂಗಡಿ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿರುವ ಘಟನೆಯೂ ನಡೆದಿದೆ.
ಉರುಳಿಬಿದ್ದ ವಿದ್ಯುತ್ ಕಂಬಗಳು: ಮೆಸ್ಕಾಂ ವಿಭಾಗದ ಉಳ್ಳಾಲ-1 ಭಾಗದ ಮೊಗವೀರಪಟ್ನ, ಉಳ್ಳಾಲ ಹೊಯ್ಗೆ, ವಿಜಯನಗರ, ಮೂರುಕಟ್ಟ, ಆನಂದಾಶ್ರಮ ಶಾಲೆ, ಸೋಮೇಶ್ವರ ದೇವಸ್ಥಾನ ದ್ವಾರದ ಬಳಿ, ಸೋಮೇಶ್ವರ ಬೀಚ್ ಪ್ರದೇಶಗಳಲ್ಲಿ 25 ಕ್ಕೂ ಹೆಚ್ಚು ಕಂಬಗಳು ನೆಲಕ್ಕೆ ಉರುಳಿ ಧರಾಶಾಹಿಯಾಗಿದೆ. ಕೋಟೆಕಾರು ವಿಭಾಗದ ಸೋಮೇಶ್ವರ, ಉಚ್ಚಿಲ, ಕಿನ್ಯಾ ಬೆಳರಿಂಗೆ, ಮಾಡೂರು, ತಲಪಾಡಿ, ಬಜಂಗ್ರೆ, ಕನೀರುತೋಟ ಬಳಿ 28 ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಬಿದ್ದಿವೆ. ದೇರಳಕಟ್ಟ (ಉಳ್ಳಾಲ-2) ಭಾಗದ ಬೆಳ್ಮ ಮಾಗಂತಡಿ, ಬರಿಕೆ, ಮಂಗಳಾಂತಿ, ಗಟ್ಟಿಕುದ್ರು, ಎಲಿಯಾರುಪದವು ಸ್ಥಳಗಳಲ್ಲಿ ತಂತಿ ತುಂಡಾಗಿ ನೆಲಕ್ಕೆ ಬಿದ್ದು ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ ಉಂಟಾಗಿದೆ. ಸಮುದ್ರ ತೀರದ ಪ್ರದೇಶಗಳಲ್ಲಿ ಶನಿವಾರ ಬೆಳಿಗ್ಗೆ ಜೋರಾಗಿ ಬೀಸಿದ ಗಾಳಿಯಿಂದ ವಿದ್ಯುತ್ ಕಂಬಗಳು ನೆಲಕ್ಕುರುಳಿದರೆ, ಉಳಿದೆಡೆ ಮರ ಬಿದ್ದು ಕಂಬಗಳು ಹಾಗೂ ತಂತಿಗಳಿಗೆ ಹಾನಿಯಾಗಿದೆ.
ಮನೆ-ಅಂಗಡಿಗೆ ಬಿದ್ದ ಮರ : ಕುತ್ತಾರು ದೇವಸ್ಥಾನದ ಬದಿಯಲ್ಲಿರುವ ಸುಂದರ್ ಮತ್ತು ಲೀಲಾವತಿ ದಂಪತಿಗೆ ಸೇರಿದ ಮನೆ ಮೇಲೆ ಮರ ಉರುಳಿಬಿದ್ದು ಮನೆಗೆ ಹಾನಿಯುಂಟಾದರೆ, ಅದೇ ಕಟ್ಟಡದಲ್ಲಿ ಬಾಡಿಗೆಗೆ ಕೊಟ್ಟಿದ್ದ ಅಂಗಡಿ ಮೇಲೂ ಬಿದ್ದ ಪರಿಣಾಮ ಅಪಾರ ನಷ್ಟ ಸಂಭವಿಸಿದೆ. ಘಟನೆ ವೇಳೆ ಅಂಗಡಿಯಲ್ಲಿದ್ದ ಇಬ್ಬರು ಗ್ರಾಹಕರು ಶಬ್ದ ಕೇಳಿ ಓಡಿ ಪರಾರಿಯಾಗಿ ಸಂಭಾವ್ಯ ಅನಾಹುತದಿಂದ ಪಾರಾದರು. ಅಕ್ವೇರಿಯಂ ಹಾಗೂ ಸಾಕು ಪ್ರಾಣಿಗಳ ಮಾರಾಟದ ಅಂಗಡಿಗೆ ಭಾಗಶ: ಹಾನಿಯಾಗಿ ಸುಮಾರು 50,000 ರೂ. ನಷ್ಟ ಉಂಟಾಗಿದೆ ಎಂದು ಅಂಗಡಿ ಮಾಲೀಕ ಲೋಹಿತ್ ದೂರಿದ್ದಾರೆ.
ಕೃತಕ ನೆರೆ : ಅಂಬ್ಲಮೊಗರು ಅಡು ಎಂಬಲ್ಲಿನ ತಗ್ಗುಪ್ರದೇಶದಲ್ಲಿ ನೀರು ತುಂಬಿ ಕೃತಕ ನೆರೆ ಆವರಿಸಿದೆ. ಇದರಿಂದ ಕೃಷಿ ಕಾರ್ಯಕ್ಕೆ ಅಡ್ಡಿಯುಂಟಾಗಿದೆ. ಕೃಷಿ ನಾಶದಿಂದ ಅಪಾರ ನಷ್ಟವೂ ಉಂಟಾಗಿದೆ. ಕುತ್ತಾರು -ಎಲಿಯಾರುಪದವು ನಡುವಿನಲ್ಲಿ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ವಾಹನಗಳು ಪರ್ಯಾಯ ಮಾರ್ಗದಲ್ಲಿ ಚಲಿಸುತ್ತಿವೆ. ಆದರೆ ಮಳೆಯಿಂದಾಗಿ ಪರ್ಯಾಯ ಮಾರ್ಗದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ದೇವಸ್ಥಾನಕ್ಕೆ ಹಾನಿ : ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ಒಳ ಆವರಣದಲ್ಲಿ ಹಾಕಲಾದ ತಗಡು ಶೀಟುಗಳು ಹಾರಿಹೋಗಿ ಅಪಾರ ನಷ್ಟ ಉಂಟಾಗಿದೆ. ಜನರೇಟರ್ ಕೊಠಡಿಯ ಮಹಡಿ ಕುಸಿದು ಹಾನಿಯಾಗಿದೆ. ಸಮೀಪದ ಹಿಂದು ರುದ್ರ ಭೂಮಿಯ ಶೀಟಿನ ಹೊದಿಕೆಯೂ ಸಂಪೂರ್ಣ ಹಾನಿಯಾಗಿದೆ.
ಸ್ಥಳಕ್ಕೆ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಾ.ಪಂ ಸದಸ್ಯ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.