ಧರ್ಮಸ್ಥಳ, ಜೂ 10: ನಗರಾಭಿವೃದ್ದಿ ಸಚಿವ ಯು.ಟಿ ಖಾದರ್ ಜೂ 10 ರ ಭಾನುವಾರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಮಾಜಿ ಸಚಿವ ಅಭಯ್ ಚಂದ್ರ ಜೈನ್ ಹಾಗೂ ಎಂ ಎಲ್ ಸಿ ಹರೀಶ್ ಕುಮಾರ್ ಅವರೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಆಗಮಿಸಿದ ಅವರು ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಚರ್ಚೆ ನಡೆಸಿದರು.
ಸಾಮಾನ್ಯವಾಗಿ ಕ್ಷೇತ್ರಕ್ಕೆ ಭೇಟಿ ನೀಡುವ ರಾಜಕಾರಣಿಗಳು , ಶ್ರೀ ಮಂಜುನಾಥನ ದರ್ಶನ ಪಡೆದು ಬಳಿಕ ಹೆಗ್ಗಡೆಯವರನ್ನು ಭೇಟಿಯಾಗುವುದು ರೂಢಿ. ಆದರೆ ಸಚಿವ ಖಾದರ್ ಮೊದಲು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವನ್ನು ಭೇಟಿಯಾಗಿದ್ದಾರೆ. ಬಳಿಕ ಹಿಂತಿರುವಾಗ ದೇವಸ್ಥಾನದ ಒಳ ಹೋಗೋಕೆ ನಿರಾಕರಿಸಿದ ಅವರು ಅಲ್ಲೇ ಹೊರಭಾಗದಲ್ಲಿರುವ ಕಾಣಿಕೆ ಹುಂಡಿಗೆ ಕಾಣಿಕೆ ಹಾಕಿದ್ದಾರೆ.
ಧರ್ಮಸ್ಥಳದಲ್ಲಿ ದೇವಸ್ಥಾನದ ಒಳಹೋಗಲು ಯಾವುದೇ ಜಾತಿ ಧರ್ಮದವರಿಗೆ ನಿರ್ಬಂಧ ಇಲ್ಲವಾದರೂ, ಸಚಿವ ಖಾದರ್ ಹೊರಗಿನಿಂದಲೇ ಪಾರ್ಥನೆ ಸಲ್ಲಿಸಿ ಅಲ್ಲೇ ಹೊರಭಾಗದಲ್ಲಿರುವ ಕಾಣಿಕೆಹೊಂಡಿಗೆ ಕಾಣಿಕೆ ಹಾಕಿ ಬಳಿಕ ತೆರಳಿದ್ದಾರೆ. ಇವರಿಗೆ ಅಭಯ್ ಚಂದ್ರ ಜೈನ್, ಎಂ ಎಲ್ ಸಿ ಹರೀಶ್ ಕುಮಾರ್ ಅವರು ಸಾಥ್ ನೀಡಿದ್ದಾರೆ.
ತೀವ್ರ ಚರ್ಚೆಗೆ ಕಾರಣವಾದ ಖಾದರ್ ಅವರ ಈ ನಡವಳಿಕೆಗೆ , ಸಮಯದ ಅಭಾವ , ರಂಜಾನ್ ನ ಉಪವಾಸದ ಅಥವಾ ಇನ್ನಿತರ ಕಾರಣಗಳಿರಬಹುದು ಎನ್ನಲಾಗಿದೆ.