ಮುಂಬೈ, ಜೂ09: ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಮಾವೊವಾದಿಗಳು ಸಂಚು ರೂಪಿಸಿದ್ದಾರೆ ಎಂಬ ವಿಷಯವನ್ನು ಪುಣೆ ಪೊಲೀಸರು ಬಹಿರಂಗಪಡಿಸಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಮುಗಿಸಿದ ರೀತಿಯಲ್ಲಿಯೇ ಮೋದಿ ಹತ್ಯೆಗೆ ಸಂಚು ರೂಪಿಸಿರುವ ಮಾಹಿತಿ ಇದೀಗ ಪೊಲೀಸರಿಗೆ ಲಭ್ಯವಾಗಿದೆ. ಕೋರೆಗಾಂವ್ – ಭೀಮಾ ಹಿಂಸಾಚಾರದಲ್ಲಿ ಮಾವೊವಾದಿಗಳ ಪಾತ್ರದ ಕುರಿತು ಇದೇ ಜನವರಿಯಲ್ಲಿ ತನಿಖೆ ನಡೆದಿತ್ತು. ಈ ವೇಳೆ ಸಿಕ್ಕ ಪತ್ರದಿಂದ ಸಂಚು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ನಿಷೇಧಿಸಿರುವ ಸಿಪಿಐ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಪೊಲೀಸರು ಐವರನ್ನು ಬಂಧಿಸಿದ್ದರು. ಬಂಧಿತ ವ್ಯಕ್ತಿಯ ಮನೆಯಲ್ಲಿ ಶೋಧ ನಡೆಸುತ್ತಿದ್ದ ವೇಳೆ ಪತ್ರವೊಂದು ಸಿಕ್ಕಿತ್ತು. ಈ ವೇಳೆ ಹತ್ಯೆಯ ಸಂಚು ಗೊತ್ತಾಗಿದೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಇದೊಂದು ಕಟ್ಟುಕಥೆ ಎಂದು ಹೇಳಿದೆ. ಮಾತ್ರವಲ್ಲ ಕಾಂಗ್ರೆಸ್ ಈ ಆರೋಪವನ್ನು ಲೇವಡಿ ಮಾಡಿದೆ. ಯಾವಾಗ ಮೋದಿ ಜನಪ್ರಿಯತೆ ಕಡಿಮೆಯಾಗುತ್ತೋ ಆಗ ಅವರ ಹತ್ಯೆಯ ಸಂಚಿನ ಕಥೆಯನ್ನು ಹರಿಬಿಡಲಾಗುತ್ತದೆ. ಇಂತಹ ಕಟ್ಟುಕಥೆಗಳನ್ನು ಹೆಣೆಯುವುದು ಮೋದಿ ಅವರ ತಂತ್ರ ಎಂದು ಪ್ರತಿಕ್ರಿಯಿಸಿದೆ.