ಬೆಂಗಳೂರು, ಜೂ09: ಬಿಜೆಪಿ ಪಕ್ಷ ಸೇರಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕೆಲ ಅತೃಪ್ತ ಶಾಸಕರು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ನಡೆದ ಯುವ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಕೊಟ್ಟಿದ್ದ ಸುಳ್ಳು ಭರವಸೆಗಳನ್ನು ಜನ ಸತ್ಯ ಎಂದು ನಂಬಿದ್ದರು. ಆದರೆ ಈಗ ಎರಡು ಪಕ್ಷಗಳು ಖಾತೆ ಹಂಚಿಕೆಯಲ್ಲಿ ಬಿಕ್ಕಟ್ಟು ಎದುರಿಸುತ್ತಿದೆ. ಮಾತ್ರವಲ್ಲ, ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿದೆ. ಅಪವಿತ್ರ ಮೈತ್ರಿ ಸರ್ಕಾರದ ಆಡಳಿತವನ್ನು ನಾವು ಕಾದು ನೋಡುತ್ತೇವೆ ಎಂದು ಹೇಳಿದ್ದಾರೆ.
ಬಿಜೆಪಿಯನ್ನು ಆಡಳಿತದಿಂದ ದೂರವಿಡಲು, ಕಾಂಗ್ರೆಸ್ ಮುಂದಾಗಿತ್ತು. ನಾವು ಜೆಡಿಎಸ್ ಜೊತೆಗೆ ಮೈತ್ರಿಗೆ ಮುಂದಾಗುತ್ತೇವೆ ಎಂಬುದು ಕಾಂಗ್ರೆಸ್ ಕಲ್ಪನೆಯಾಗಿತ್ತು. ಆದರೆ ವಂಚನೆ ಮಾಡಿದ್ದ ಜೆಡಿಎಸ್ ಜೊತೆ ಮೈತ್ರಿಗೆ ಬಿಜೆಪಿ ಸಿದ್ಧವಿರಲಿಲ್ಲ ಎಂಬುದು ಕಾಂಗ್ರೆಸ್ಗೆ ಗೊತ್ತಿರಲಿಲ್ಲ. ಇದೀಗ ರಾಜ್ಯದಲ್ಲಿ ಕೇವಲ 37 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಪ್ರಜಾತಂತ್ರ ವ್ಯವಸ್ಥೆಯನ್ನೇ ಬುಡಮೇಲು ಮಾಡಿದೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಆಡಳಿತದಲ್ಲಿ ಘೋಷಣೆಯಾಗಿದ್ದ ಸಾಲ ಮನ್ನಾದ 8500 ಕೋಟಿ ರೂ. ಸಹಕಾರ ಬ್ಯಾಂಕಿಗಳಿಗೆ ಪಾವತಿಯಾಗಿಲ್ಲ. ಹೀಗಾಗಿ ರೈತರಿಗೆ ಹೊಸ ಸಾಲ ಪಡೆಯಲು ಕಷ್ಟವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.