ಮಂಗಳೂರು, ಜೂ09: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಲು ಅಪಪ್ರಚಾರವೇ ಕಾರಣ ಎಂದು ನೂತನ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಈ ಸೋಲಿಗೆ ಅಪಪ್ರಚಾರವೇ ಕಾರಣ. ಆದರೆ ಈ ಸೋಲಿಗೆ ನಾವು ಎದೆಗುಂದಬೇಕಾಗಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ಮತ್ತೆ ಗೆದ್ದು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು ನಗರದ ಇನ್ನಷ್ಟು ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪಕ್ಷದ ಹಿರಿಯ ನಾಯಕರ ಸಲಹೆ ಸೂಚನೆಯನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇನೆ. ವಸತಿ ಸೌಲಭ್ಯಗಳ ಪ್ರಯೋಜನವನ್ನು ಇನ್ನೂ ಹೆಚ್ಚಿನ ಜನ ಪಡೆದುಕೊಳ್ಳಬೇಕು. ಜನ ಇದರ ಪ್ರಯೋಜನ ಪಡೆಯುವಂತಾಗಲು ಸದ್ಯ ಇರುವ ವಾರ್ಷಿಕ ಕನಿಷ್ಠ ಆದಾಯ ಮಿತಿಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರಕಾರ ರಾಜ್ಯದಲ್ಲಿ ಯಶಸ್ವಿಯಾಗಿ 5 ವರುಷಗಳನ್ನು ಪೂರೈಸುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಕಾಂಗ್ರೆಸ್ ಪಕ್ಷವನ್ನು ಬಲಪಡಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ಪಾಲಿಕೆ ಮತ್ತು ಸಂಸತ್ ಚುನಾವಣೆಯಲ್ಲಿ ನಾವು ಗೆಲುವು ಸಾಧಿಸಬೇಕು ಎಂದು ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸಿದರು.