ಬಂಟ್ವಾಳ, ಜೂ09: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆ ಮೇಲೆ ಬಂಟ್ವಾಳ ಪೊಲೀಸರು ದಾಳಿ ನಡೆಸಿ 5 ಕ್ಕೂ ಹೆಚ್ಚು ದನಗಳನ್ನು ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಲೊರೆಟ್ಟಪದವು ಸಮೀಪದ ಟಿಪ್ಪುನಗರ ಎಂಬಲ್ಲಿ ಕಸಾಯಿಖಾನೆ ಮೇಲೆ ದಾಳಿ ನಡೆದಿದ್ದು, ಪೊಲೀಸರು ವಾಹನ ಸಹಿತ ಐದು ದನಗಳನ್ನು ವಶಪಡಿಸಿಕೊಂಡಿದ್ದಾರೆ. ಟಿಪ್ಪು ನಗರದ ಕಲ್ಲಿನ ಕ್ವಾರೆ ಬಳಿಯ ಖಾಲಿ ಜಾಗದಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆ, ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆರೋಪಿಗಳು ಪರಾರಿಯಾಗಿದ್ದು, ಪೊಲೀಸರು ಸ್ಥಳದಲ್ಲಿದ್ದ 5 ದನಗಳು, ಸುಮಾರು 150 ಕೆ.ಜಿ. ಮಾಂಸ, ಪಿಕಪ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.